ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿಗೊಳಿಸಲು ಸೂಕ್ತ ಶಿಫಾರಸು ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿಗೊಳಿಸಲು ಸೂಕ್ತ ಶಿಫಾರಸು ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಏ.24 ರಂದು ನಡೆಯಲಿರುವ ಸಚಿವ ಸಂಪುಟ ಸಭೆ
ಇದೇ ವೇಳೆ ಸರ್ಕಾರದ ಮುಖ್ಯಕಾರ್ಯದರ್ಶಿಗಳ ನೇತೃತ್ವದ ಸಮಿತಿ ನೀಡುವ ಶಿಫಾರಸುಗಳ ಆಧಾರದ ಮೇಲೆ ಏ.24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ವಿಶೇಷ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ವಿಷಯ ಪಟ್ಟಿಯಲ್ಲಿದ್ದ ವಿಷಯಗಳ ಮೇಲಿನ ಚರ್ಚೆ ಪೂರ್ಣಗೊಂಡ ಬಳಿಕ ಸಚಿವ ಕೆ.ಎಚ್. ಮುನಿಯಪ್ಪ ಅವರು ಒಳ ಮೀಸಲಾತಿ ಕುರಿತು ಪ್ರಸ್ತಾಪಿಸಿ ತೀವ್ರ ಅಸಮಾಧಾನ ಹೊರ ಹಾಕಿದರು.
ಮೂರು ದಶಕಗಳ ಹೋರಾಟದ ಫಲವಾಗಿ ಒಳ ಮೀಸಲಾತಿ ಜಾರಿಗೆ ಬರುತ್ತಿದೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ವಿನಾಕಾರಣ ವಿಳಂಬ ಮಾಡುತ್ತಿರುವುದು ಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜನರಿಗೆ ಪಕ್ಷ ಹಾಗೂ ಸರ್ಕಾರದ ಬಗ್ಗೆ ತಪ್ಪು ಸಂದೇಶ ಹೋಗುತ್ತಿದ್ದು ನಾವು ಸಚಿವ ಸ್ಥಾನದಲ್ಲಿ ಮುಂದುವರೆಯಲಾಗದ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ ಇಂದೇ ಅಂತಿಮ ನಿರ್ಧಾರ ಆಗಬೇಕು ಎಂದು ಪಟ್ಟು ಹಿಡಿದರು.
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಒಳ ಮೀಸಲಾತಿ ವಿಚಾರ ತುಂಬಾ ಸಂಕೀರ್ಣವಾದದ್ದು. ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲು ಚರ್ಚಿಸಬೇಕೆಂದರೆ ತುಂಬಾ ಸಮಯ ಬೇಕು ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಒಳ ಮೀಸಲಾತಿ ಚರ್ಚೆ ಶುರುವಾದರೆ ಮಧ್ಯರಾತ್ರಿ ಆಗುತ್ತೆ, ನೀವು ಮಾಡಿಕೊಳ್ಳಿ ಎನ್ನುತ್ತಾ ಸಭೆಯಿಂದ ಹೊರ ನಡೆದರು. ಆಗ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ರಹೀಂ ಖಾನ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಹೊರನಡೆದರು.
ತಾಂತ್ರಿಕ ಸಮಿತಿಗೆ ನೀಡಲು ಸಮ್ಮತಿ:
ಒಳ ಮೀಸಲಾತಿ ಚರ್ಚೆ ವೇಳೆ ನ್ಯಾಯಾಲಯ ಮೀಸಲಾತಿಗೆ ಶೇ.50 ರ ಮಿತಿ ವಿಧಿಸಿರುವುದರಿಂದ ಶೇ.15 ರಷ್ಟು ಎಸ್ಸಿ ಮೀಸಲಾತಿ ಮಾತ್ರ ಅನುಷ್ಠಾನ ಮಾಡಬಹುದು ಎಂಬ ಕಾರಣಕ್ಕೆ ವಿಳಂಬ ಮಾಡುವುದು ಬೇಡ. ಬಲಗೈ, ಎಡಗೈ ಹಾಗೂ ಸ್ಪೃಶ್ಯರಿಗೆ ಕ್ರಮವಾಗಿ ಶೇ.5.3, ಶೇ.5.3 ಹಾಗೂ ಶೇ.4.4 ರಂತೆ ವರ್ಗೀಕರಣ ಮಾಡಿ ಒಳ ಮೀಸಲಾತಿ ನೀಡಬಹುದು ಎಂಬ ಬಗ್ಗೆ ಚರ್ಚಿಸಲಾಯಿತು.
ಶೇ.15 ರಷ್ಟು ಮೀಸಲಾತಿಯಲ್ಲಿ ಬಲಗೈ, ಎಡಗೈ ಹಾಗೂ ಸ್ಪೃಶ್ಯರ ನಡುವೆ ಶೇ.5.3, ಶೇ.5.3 ಹಾಗೂ ಶೇ.4.4 ರಂತೆ ವರ್ಗೀಕರಣ ಮಾಡುವ ಕುರಿತು ಚರ್ಚಿಸಲಾಯಿತು.
ಆದರೆ, ಈ ರೀತಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಇದನ್ನು ವೈಜ್ಞಾನಿಕವಾಗಿ ಚರ್ಚಿಸಿ ಅನುಷ್ಠಾನಗೊಳಿಸಬೇಕು ಎಂಬ ಕಾರಣಕ್ಕೆ ತಾಂತ್ರಿಕ ಸಮಿತಿ ರಚನೆಗೆ ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.

