ಸಾವಿನಲ್ಲೂ ಒಂದಾದ ಪ್ರಾಣ ಸ್ನೇಹಿತರು

KannadaprabhaNewsNetwork |  
Published : Jan 06, 2025, 01:00 AM IST
ಲಿಂಗರಾಜ ಬೀರನೂರ | Kannada Prabha

ಸಾರಾಂಶ

ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿ ಸಿಲಿಂಡರ್‌ ಸೋರಿಕೆಯಿಂದಾಗಿ ನಡೆದ ಅಗ್ನಿ ಅವಘಡದಲ್ಲಿ ಪ್ರಾಣ ಸ್ನೇಹಿತರಿಬ್ಬರು ಮೃತಪಟ್ಟಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಲಿಂಗರಾಜ ಬೀರನೂರ(19) ಹಾಗೂ ಮಂಜುನಾಥ ವಾಗ್ಮೋಡೆ (19) ಇಬ್ಬರೂ ಪ್ರಾಣ ಸ್ನೇಹಿತರು. ಒಬ್ಬರನ್ನೊಬ್ಬರು ಬಿಟ್ಟು ಅಲಗದಂತೆ ಕಾಲ ಕಳೆದವರು. ಈಗ ಒಂದೇ ದುರಂತದಲ್ಲಿ ಗಾಯಗೊಂಡು ಮೃತಪಡುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ.

ಇಲ್ಲಿನ ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿ ಕಳೆದ ಡಿ. 22ರಂದು ಮಧ್ಯರಾತ್ರಿ ಸಿಲಿಂಡರ್‌ ಸೋರಿಕೆಯಿಂದಾಗಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ 9 ಅಯ್ಯಪ್ಪ ಮಾಲಾಧಾರಿಗಳಲ್ಲಿ ಲಿಂಗರಾಜ, ಮಂಜುನಾಥ ಸೇರಿದಂತೆ 8 ಜನರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

ಇಬ್ಬರೂ ಸಾಯಿನಗರದ ಅಚ್ಚವ್ವ ಕಾಲನಿ ನಿವಾಸಿಗಳಾಗಿದ್ದು, ಅಕ್ಕಪಕ್ಕದಲ್ಲೇ ಇವರ ಮನೆಗಳಿವೆ. ಒಂದನೇ ತರಗತಿಯಿಂದ ಹಿಡಿದು ಎಸ್‌ಎಸ್‌ಎಲ್‌ಸಿ ವರೆಗೆ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ನಂತರ ಲಿಂಗರಾಜ ಬೀರನೂರ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿರಲಿಲ್ಲ. ಹಾಗಾಗಿ ಸರ್ಕಾರಿ ಐಟಿಐ ಕಾಲೇಜಿಗೆ ಪ್ರವೇಶ ದೊರೆತರೂ ಅದನ್ನು ಮೊಟಕುಗೊಳಿಸಿ ಖಾಸಗಿ ಸಂಸ್ಥೆಯೊಂದರಲ್ಲಿ ಗಾರ್ಡನ್‌ ಕೆಲಸಕ್ಕೆ ಸೇರಿದ್ದನು. ಇನ್ನು ಮಂಜುನಾಥ ಸ್ಥಳೀಯ ಕಾಲೇಜುವೊಂದರಲ್ಲಿ ಕಂಪ್ಯೂಟರ್‌ ಸೈನ್ಸ್‌ ಕಲಿಯುತ್ತಿದ್ದ.

ಪತಿ, ಮಗನನ್ನು ಕಳೆದುಕೊಂಡ ಕವಿತಾ:

ಲಿಂಗರಾಜರ ತಂದೆ ಸಿದ್ದಪ್ಪ ಬೀರನೂರ ಲೈಬ್ರೇರಿಯನ್‌ ಅಸಿಸ್ಟಂಟ್‌ ಆಗಿ ಕೆಲಸ ಮಾಡುತ್ತಿದ್ದರು. 2020ರಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಅನುಕಂಪದ ಆಧಾರದ ಮೇಲೆ ಲಿಂಗರಾಜರ ತಾಯಿ ಕವಿತಾ ಅ‍ವರಿಗೆ ಅದೇ ಸಂಸ್ಥೆಯಲ್ಲಿ ಗಾರ್ಡನ್‌ನಲ್ಲಿ ಕೆಲಸ ದೊರೆತಿದೆ. ಇದೇ ಇವರ ಜೀವನಕ್ಕೆ ಆಧಾರವಾಗಿದೆ. 4 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಕವಿತಾ ಈಗ ಇದ್ದೊಬ್ಬ ಮಗನನ್ನೂ ಕಳೆದುಕೊಂಡು ಕಣ್ಣೀರಲ್ಲಿ ಕಾಲ ಕಳೆಯುತ್ತಿದ್ದಾರೆ.

ಚಿಕ್ಕಮ್ಮನ ಮನೆಯಲ್ಲೇ ವಾಸ

ಮಂಜುನಾಥ ವಾಗ್ಮೋಡೆ ತಂದೆ-ತಾಯಿಗಳು ಹಳೇ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಆದರೆ, ಅಚ್ಚವ್ವನ ಕಾಲನಿಯಲ್ಲಿರುವ ತನ್ನ ಚಿಕ್ಕಮ್ಮ ಮಂಗಳಾ ಅವರ ಮನೆಯಲ್ಲಿಯೇ ಬೆಳೆದಿದ್ದು. ಹಾಗಾಗಿ ಲಿಂಗರಾಜನೊಂದಿಗೆ ಚಿಕ್ಕಂದಿನಿಂದಲೂ ತುಂಬಾ ಒಡನಾಟವಿತ್ತು. ಎಲ್ಲಿಯೇ ಹೋಗಲಿ ಇಬ್ಬರೂ ಸೇರಿಯೇ ಹೋಗುತ್ತಿದ್ದರು. ಕಂಪ್ಯೂಟರ್‌ ಎಂಜಿನಿಯರ್‌ ಆಗುವ ಕನಸು ಕಂಡಿದ್ದ. ಆದರೆ, ವಿಧಿಯ ಆಟಕ್ಕೆ ಬಲಿಯಾಗಿದ್ದಾನೆ.

27ಕ್ಕೆ ಪೂಜೆಗೆ ಸಿದ್ಧತೆ

ಈ ಇಬ್ಬರೂ ಮಾಲಾಧಾರಿಗಳಾಗಿದ್ದರು. ಮಂಜುನಾಥ 2ನೇ ಬಾರಿಗೆ ಹಾಗೂ ಲಿಂಗರಾಜ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ್ದ. ಜ. 8ಕ್ಕೆ ಶಬರಿಮಲೆಗೆ ಹೋಗಲು ಎಲ್ಲ ತಯಾರಿ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ ಲಿಂಗರಾಜನ ಮನೆಯಲ್ಲಿ ಡಿ. 26ರಂದು ಸಂಜೆ ಅಯ್ಯಪ್ಪಸ್ವಾಮಿ ಪೂಜೆ ಹಮ್ಮಿಕೊಂಡಿದ್ದರು. ಘಟನೆ ನಡೆಯುವ ಮುನ್ನ ರಾತ್ರಿ (ಡಿ. 22) 10.30 ಗಂಟೆಗೆ ತಾಯಿ ಕವಿತಾ ಅವರು ಲಿಂಗರಾಜನಿಗೆ ಕರೆ ಮಾಡಿ ಪೂಜೆಗೆ ಬೇಕಾದ ಸಿದ್ಧತೆಯ ಕುರಿತು ಮಾತನಾಡುತ್ತಾರೆ. ಆಗ ಲಿಂಗರಾಜ ಈಗ ಅಯ್ಯಪ್ಪಸ್ವಾಮಿ ಪೂಜೆಯಲ್ಲಿದ್ದೇನೆ. ನಂತರ ಮಾತನಾಡುವೆ ಎಂದು ಕೇಳಿ ಕರೆ ಕಟ್‌ ಮಾಡುತ್ತಾನೆ. ಇದಾದ ಕೆಲವೇ ಗಂಟೆಗಳಲ್ಲಿ ಈ ದುರಂತ ನಡೆಯಿತು ಎಂದು ಮೃತ ಲಿಂಗರಾಜರ ತಾಯಿ ಕವಿತಾ ಭಾವುಕರಾದರು.

ಡಿ. 22ರಂದು ಮಧ್ಯರಾತ್ರಿ ನಡೆದ ಅಗ್ನಿ ಅವಘಡದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕೆಎಂಸಿಆರ್‌ಐಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಘಟನೆ ನಡೆದ ಮಾಹಿತಿ ದೊರೆಯುತ್ತಿದ್ದಂತೆ ಲಿಂಗರಾಜರ ತಾಯಿ ಹಾಗೂ ಕುಟುಂಬದವರು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಕೆಎಂಸಿಆರ್‌ಐಗೆ ತೆರಳಿ ಮಗನ ಸ್ಥಿತಿ ಕಂಡು ಮಮ್ಮಲ ಮರುಗಿದರು. ಅಯ್ಯಪ್ಪ ಮಾಲಾಧಾರಿಗಳಾಗಿದ್ದ ನಮ್ಮ ಮಕ್ಕಳಿಗೆ ಇಂತಹ ಸಾವು ಬಂದಿದ್ದು ನೋಡಿ ನನಗೆ ತುಂಬಾ ದುಃಖವಾಗಿದೆ. ಯಾವಾಗಲೂ ಅಯ್ಯಪ್ಪ... ಅಯ್ಯಪ್ಪ ಎನ್ನುತ್ತಿದ್ದ ನನ್ನ ಮಗನನ್ನು ಮಾಲೆ ಹಾಕಿದ ಒಂದೇ ವರ್ಷದಲ್ಲಿ ಆ ದೇವರು ದೂರಾಗುವಂತೆ ಮಾಡಿದ ಎಂದು ತಾಯಿ ಕವಿತಾ ಕಣ್ಣೀರು ಹಾಕಿದರು.

ತಾಯಿಯ ರೋಧನ ಕೇಳಲಿಲ್ಲ

ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಾಗ ನಾನಿನ್ನು ಬದುಕಲ್ಲ, ನಮ್ಮ ಅವ್ವನ ಮುಖ ನೋಡಬೇಕು ಕರೆಯಿರಿ ಎಂದು ವೈದ್ಯರ ಬಳಿ, ಸ್ನೇಹಿತರ ಬಳಿ ಹೇಳುತ್ತಿದ್ದಾಗ ನನ್ನ ಕರಳೇ ಕಿತ್ತುಬಂದಂತಾಗಿತ್ತು. ಹೇಗಾದರೂ ಮಾಡಿ ನನ್ನ ಮಗ ಬದುಕಿ ಮನೆಗೆ ಬರುತ್ತಾನೆ ಎಂಬ ನಂಬಿಕೆ ಇಟ್ಟಿದ್ದೆ. ಅದೆಲ್ಲ ಸುಳ್ಳಾಯಿತು. ಆ ಅಯ್ಯಪ್ಪನಿಗೆ ಈ ತಾಯಿಯ ರೋಧನ ಕೇಳಲಿಲ್ಲ.

- ಕವಿತಾ ಬೀರನೂರ, ಮೃತ ಲಿಂಗರಾಜನ ತಾಯಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!