ವಾಣಿಜ್ಯ ಸಂಕೀರ್ಣ ಉದ್ಘಾಟನೆ ಯಾವಾಗ ?

KannadaprabhaNewsNetwork | Published : Jan 6, 2025 1:00 AM

ಸಾರಾಂಶ

ಹಳೇ ಬಸ್‌ ನಿಲ್ದಾಣವನ್ನು ತೆರವುಗೊಳಿಸಿ ವಾಣಿಜ್ಯ ಸಂಕೀರ್ಣ ಮಾಡಲು ಹೋದಾಗ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಬಂದಿದ್ದು ಪಟ್ಟಣದಲ್ಲಿ ಕಳೆದ ಹತ್ತಾರು ವರ್ಷಗಳಿಂದ ನಡೆದಿರುವ ಕಾಮಗಾರಿ ಮುಗಿಯುವುದು ಯಾವಾಗ ಅಲ್ಲಿ ಅಂಗಡಿ ಮುಂಗಟ್ಟುಗಳು ವ್ಯಾಪಾರಸ್ಥರ ಕೈಗೆ ಸಿಗುವುದು ಯಾವಾಗ ಎಂದು ಕಾಯುವಂತಾಗಿದೆ

ಎಸ್.ನಾಗಭೂಷಣ ಕನ್ನಡಪ್ರಭ ವಾರ್ತೆ, ತುರುವೇಕೆರೆ

ಹಳೇ ಬಸ್‌ ನಿಲ್ದಾಣವನ್ನು ತೆರವುಗೊಳಿಸಿ ವಾಣಿಜ್ಯ ಸಂಕೀರ್ಣ ಮಾಡಲು ಹೋದಾಗ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಬಂದಿದ್ದು ಪಟ್ಟಣದಲ್ಲಿ ಕಳೆದ ಹತ್ತಾರು ವರ್ಷಗಳಿಂದ ನಡೆದಿರುವ ಕಾಮಗಾರಿ ಮುಗಿಯುವುದು ಯಾವಾಗ ಅಲ್ಲಿ ಅಂಗಡಿ ಮುಂಗಟ್ಟುಗಳು ವ್ಯಾಪಾರಸ್ಥರ ಕೈಗೆ ಸಿಗುವುದು ಯಾವಾಗ ಎಂದು ಕಾಯುವಂತಾಗಿದೆ.

ಗುಣಮಟ್ಟ ಸರಿಯಿಲ್ಲ ಎಂಬ ಕಾರಣದ ಮೇರೆಗೆ ಕಾಮಗಾರಿಯ ಗುತ್ತಿಗೆದಾರರ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯ ನೆಪದಲ್ಲಿ ಕಾಮಗಾರಿ ಮೂರ್ನಾಲ್ಕು ವರ್ಷಗಳ ಕಾಲ ಕುಂಠಿತಗೊಂಡಿತು. ಅಂತೂ ಇಂತು ವಿಚಾರಣೆ ಸಂಪೂರ್ಣಗೊಂಡರೂ ಸಹ ಕಾಮಗಾರಿ ಪೂರ್ತಿ ಆಗಿಲ್ಲ.

ತುರುವೇಕೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಹಾಗೂ ವ್ಯವಹಾರಿಕ ಕೇಂದ್ರವಾಗಿರುವ ಹಳೆ ಬಸ್ ನಿಲ್ದಾಣದಲ್ಲಿ ಸುಮಾರು ಐದಾರು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಪಟ್ಟಣ ಪಂಚಾಯಿತಿಯ ವಾಣಿಜ್ಯ ಸಂಕೀರ್ಣಕ್ಕೆ ಇನ್ನೂ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಇದುವರೆಗೂ ಸಹ ಒಂದಲ್ಲಾ ಒಂದು ಕಾಮಗಾರಿಗಳು ಬಾಕಿ ಇರುವ ಕಾರಣಕ್ಕೆ ಅದು ಪ್ರಾರಂಭಗೊಳ್ಳುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಈ ಹಿಂದೆ ಶಾಸಕರಾಗಿದ್ದ ಮಸಾಲ ಜಯರಾಮ್ ರವರು ತಮ್ಮ ಅವಧಿಯಲ್ಲಿ ಈ ಕಟ್ಟಡವನ್ನು ಉದ್ಘಾಟನೆ ಮಾಡಬೇಕೆಂದು ಪಣತೊಟ್ಟು ಸಾಂಕೇತಿಕವಾಗಿ ಉದ್ಘಾಟನೆ ನೆರವೇರಿಸಿದ್ದರು. ಆದರೆ ಕಾಮಗಾರಿ ಸಂಪೂರ್ಣವಾಗಿರಲಿಲ್ಲ. ಅಲ್ಲಿ ವಿದ್ಯುತೀಕರಣ ಸೇರಿದಂತೆ ಹಲವಾರು ಕಾಮಗಾರಿಗಳು ಅರ್ಧಂಬರ್ಧ ಆಗಿದ್ದ ಹಿನ್ನೆಲೆಯಲ್ಲಿ ಪ್ರಾರಂಭ ಆಗಲಿಲ್ಲ. ಇಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಾಗಿದೆ. ಕಟ್ಟಡದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದ ವೇಳೆ ಈ ಕಟ್ಟಡದಲ್ಲಿ ಒಂದಿಬ್ಬರು ಸಾವನ್ನಪ್ಪಿರುವ ಘಟನೆಗಳು ಕೂಡ ನಡೆದಿದೆ. ರಾತ್ರಿ ವೇಳೆ ಇದು ಅನೈತಿಕ ಚಟುವಟಿಕೆಯ ತಾಣವಾಗಿದೆ. ಕೂಡಲೇ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣವನ್ನು ಪ್ರಾರಂಭಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಮಾರು 45 ಮಳಿಗೆಗಳು ಇವೆ. ಪ್ರತಿ ತಿಂಗಳು ಕನಿಷ್ಠವೆಂದರೂ 10 ಲಕ್ಷಕ್ಕೂ ಹೆಚ್ಚು ಆದಾಯವನ್ನು ನಿರೀಕ್ಷಿಸಲಾಗಿದೆ. ಹರಾಜಿನಲ್ಲಿ ಎರಡು ಕೋಟಿಗೂ ಹೆಚ್ಚು ಅಧಿಕ ಠೇವಣಿ ಸಿಗುವ ಸಾಧ್ಯತೆಯೂ ಇದೆ. ಇಷ್ಟಾದರೂ ಇನ್ನೂ ಪಟ್ಟಣ ಪಂಚಾಯತಿ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಲು ಮೀನಮೇಷ ಎಣಿಸಲಾಗುತ್ತಿದೆ. ಕೋಟ್ .....

ವಾಣಿಜ್ಯ ಸಂಕೀರ್ಣದ ಕಾಮಗಾರಿ ಸಂಪೂರ್ಣಗೊಂಡಿದೆ. ಆದರೆ ವಿದ್ಯುತ್ ಸಂಪರ್ಕದ ಕಾಮಗಾರಿ ಮಾತ್ರ ಬಾಕಿ ಇದೆ. ಈ ಸಂಬಂಧ ಈಗಾಗಲೇ ಟೆಂಡರ್ ಸಹ ಕರೆಯಲಾಗಿದೆ. ಇನ್ನು ಎರಡು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳು ಪೂರ್ಣಗೊಂಡು ವಾಣಿಜ್ಯ ಸಂಕೀರ್ಣ ಲೋಕಾರ್ಪಣೆಗೊಳ್ಳಲಿದೆ.

- ಶ್ರೀನಾಥ್ ಪ್ರಭು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಟ್ಟಣ ಪಂಚಾಯಿತಿ ತುರುವೇಕೆರೆ.

Share this article