ಹಾವೇರಿ: ತಾಲೂಕು ಕಚೇರಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು.
ಸಾರ್ವಜನಿಕರಿಗೆ ಈ ಕಾರ್ಯದಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಭೂದಾಖಲೆಗಳ ಡಿಜಿಟಲೀಕರಣ ತ್ವರಿತ ಸರಳ ಆಡಳಿತ, ಭೂದಾಖಲೆಗಳನ್ನು ತಿದ್ದಲು ಮತ್ತು ಕಳೆಯಲು ಅಸಾಧ್ಯ. ಸುಲಭವಾಗಿ ಕಡಿಮೆ ಸಮಯದಲ್ಲಿ ದಾಖಲೆಗಳ ಲಭ್ಯತೆ, ದಾಖಲೆಗಳು ಸುಭದ್ರ ಮತ್ತು ಶಾಶ್ವತವಾಗಿ ಸಂರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಭೂಸುರಕ್ಷಾ ಯೋಜನೆಯಡಿಯಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ತಾಲೂಕಿನಲ್ಲಿ ಒಟ್ಟು ಆರು ನುರಿತ ಕಂಪ್ಯೂಟರ್ ಅಪರೇಟರ್‌ಗಳಿಗೆ ತರಬೇತಿ ನೀಡಿ, ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ತಾಲೂಕಿನ ಕಚೇರಿಯಲ್ಲಿ ಒಟ್ಟು ಸುಮಾರು 27 ಸಾವಿರ ಕಡತಗಳು ಮತ್ತು ರಜಿಸ್ಟರ್‌ಗಳು ಭೂಸುರಕ್ಷಾ ಯೋಜನೆಯಡಿ ಡಿಜಿಟಲೀಕರಣಕ್ಕೆ ಒಳಪಡುತ್ತವೆ ಎಂಬ ಮಾಹಿತಿಯನ್ನು ಸಚಿವರಿಗೆ ನೀಡಿದರು.ಶಾಸಕ ಹಾಗೂ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಪೊಲೀಸ್ ಅಧೀಕ್ಷಕ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್, ಉಪ ವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಶರಣಮ್ಮ ಇದ್ದರು.