ನಾಲೆಗಳ ಆಧುನೀಕರಣ ಕಾರಣ ನೀಡಿ ನೀರು ನಿಲ್ಲಿಸಿದರೆ ಹೋರಾಟ: ಮಧು ಜಿ.ಮಾದೇಗೌಡ ಎಚ್ಚರಿಕೆ

KannadaprabhaNewsNetwork |  
Published : Jan 06, 2025, 01:00 AM IST
5ಕೆಎಂಎನ್ ಡಿ21 | Kannada Prabha

ಸಾರಾಂಶ

ಸದ್ಯ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 124.30 ಅಡಿ ನೀರಿದೆ. ಇದನ್ನು ನಂಬಿ ರೈತರು ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಿದ್ದಾರೆ. ಈ ವೇಳೆ ನೀರು ನಿಲ್ಲಿಸಿದರೆ ರೈತರು ಅಪಾರ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈಗ ನೀರು ನಿಲ್ಲಿಸದೆ ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಕೊಡಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕನ್ನಂಬಾಡಿ ಕಟ್ಟೆಯಲ್ಲಿ ನೀರು ತುಂಬಿರುವ ಸಂದರ್ಭದಲ್ಲೇ ನಾಲೆಗಳ ಆಧುನೀಕರಣದ ಕಾರಣ ನೀಡಿ ನೀರು ನಿಲ್ಲಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸ್ವಪಕ್ಷೀಯ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.7ರಂದು ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ನಿಲುಗಡೆಗೆ ವಿರೋಧಿಸುತ್ತೇನೆ. ಅದಕ್ಕೆ ಒಪ್ಪದಿದ್ದಲ್ಲಿ ರೈತರ ಜೊತೆಗೂಡಿ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.

ಕಳೆದ ವರ್ಷ ಪಾಂಡವಪುರ ತಾಲೂಕಿನಿಂದ ಮಂಡ್ಯ ತಾಲೂಕಿನ ಹುಲಿಕೆರೆ ಬುಗ, ಮಾಚಹಳ್ಳಿ ತನಕ ನಾಲೆ ಆಧುನೀಕರಣ ಮಾಡುವ ಸಲುವಾಗಿ ನೀರು ನಿಲುಗಡೆ ಮಾಡಿದ ಪರಿಣಾಮ ಜಿಲ್ಲೆಯ ರೈತರು ಬರದ ಪರಿಸ್ಥಿತಿ ಎದುರಿಸಿ ಸಾಕಷ್ಟು ನಷ್ಟ ಅನುಭವಿಸಿದ್ದರು ಎಂದರು.

ಈಗ ಮಂಡ್ಯ, ಮದ್ದೂರು ಮತ್ತು ಮಳವಳ್ಳಿ ತಾಲೂಕಿನ ಕೊನೇ ಭಾಗಕ್ಕೆ ನೀರುಣಿಸುವ ಹೆಬ್ಬಕವಾಡಿ, ಲೋಕಸರ ನಾಲೆಗಳನ್ನು ಆಧುನೀಕರಣ ಮಾಡಬೇಕೆಂಬ ಕಾರಣದಿಂದ ನೀರು ನಿಲುಗಡೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ ಎಂದರು.

ಸದ್ಯ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 124.30 ಅಡಿ ನೀರಿದೆ. ಇದನ್ನು ನಂಬಿ ರೈತರು ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಿದ್ದಾರೆ. ಈ ವೇಳೆ ನೀರು ನಿಲ್ಲಿಸಿದರೆ ರೈತರು ಅಪಾರ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈಗ ನೀರು ನಿಲ್ಲಿಸದೆ ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಕೊಡಬೇಕೆಂದು ಆಗ್ರಹಿಸಿದರು.

ಕಳೆದ ವರ್ಷ ಕೂಡಾ ಕಟ್ಟೆಯಲ್ಲಿ ನೀರಿದ್ದರೂ ನಾಲೆ ಆಧುನೀಕರಣದ ಕಾರಣದಿಂದ ನೀರು ನಿಲುಗಡೆ ಮಾಡಿದ್ದರಿಂದ ಕೈಗೆ ಬಂದಿದ್ದ ಬೆಳೆಗಳು ಬಾಯಿಗೆ ಸಿಗದಂತೆ ಆಗಿ ರೈತರು ಅಪಾರ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಕೂಡ ಲೋಕಸಭಾ ಚುನಾವಣೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿತು. ಪ್ರಸ್ತುತ ಕೂಡಾ ನೀರು ನಿಲುಗಡೆ ಮಾಡಿದಲ್ಲಿ ರಾಜ್ಯ ಸರ್ಕಾರದ ಮೇಲೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣವಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕೆಂದು ಸಲಹೆ ನೀಡಿದರು.

ಕಡೆ ಭಾಗದವರ ಬವಣೆ ನೀಗಿಲ್ಲ:

ಹಲವು ವರ್ಷಗಳಿಂದ ಮಳವಳ್ಳಿ, ಮದ್ದೂರು ತಾಲೂಕಿನ ನಾಲೆಗಳ ಕೊನೇ ಭಾಗದ ರೈತರು ನೀರಿಗಾಗಿ ಭಗೀರಥ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದೇ ವಿಚಾರವಾಗಿ ನನ್ನ ತಂದೆ ಜಿ.ಮಾದೇಗೌಡರು, ತಮ್ಮ ಜೀವಿತಾವಧಿ ಪೂರ್ಣ ಹೋರಾಟ ಮಾಡಿದ್ದರು. ಆದರೆ, ಆ ರೈತರ ಹೋರಾಟಕ್ಕೆ ಇನ್ನೂ ಜಯ ಸಿಕ್ಕಿಲ್ಲ ಎಂದು ಮಧು ಜಿ.ಮಾದೇಗೌಡ ಬೇಸರ ವ್ಯಕ್ತಪಡಿಸಿದರು.

ಪ್ರತಿ ಬಾರಿಯು ಕಡೆ ಭಾಗದ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ನೀರಾವರಿ ಸಲಹ ಸಮಿತಿ ಸಭೆಗಳಲ್ಲಿ ಮೊದಲು ಕಡೆ ಭಾಗಕ್ಕೆ ಆದ್ಯತೆ ಎಂದು ಹೇಳುವ ಸಚಿವರು ಕಡೆ ಭಾಗವನ್ನು ಮರೆಯುತ್ತಿದ್ದಾರೆ. ಕೊನೇ ಭಾಗದ ರೈತರು ಬೆಳೆ ಬೆಳೆಯಲು ನೀರಿಲ್ಲದೆ ಬಸವಳಿಯುತ್ತಿದ್ದು, ಹೋರಾಟ ಮಾಡಿ ನೀರು ಪಡೆಯವ ಸ್ಥಿತಿ ಇದ್ದರು ಅಧಿಕಾರಿಗಳು ಯಾವುದೇ ಕ್ರಮ ವಹಿಸುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಲೆಗಳ ಆಧುನೀಕರಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೆ ಬೇರೆ ಸಂದರ್ಭವನ್ನು ಆಯ್ಕೆ ಮಾಡಿಕೊಳ್ಳಬೇಕು. ನೀರು ಇರುವ ವೇಳೆ ಆಧುನೀಕರಣಕ್ಕೆ ಮುಂದಾಗುವುದು ರೈತರ ಬದುಕಿನ ಮೇಲೆ ಬರೆ ಎಳೆದಂತಾಗುತ್ತದೆ. ಜ.7ರಂದು ಕೆಆರ್‌ಎಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ನೀರು ನಿಲುಗಡೆಗೆ ವಿರೋಧಿಸುತ್ತೇನೆ. ಅದಕ್ಕೆ ಒಪ್ಪದಿದ್ದಲ್ಲಿ ರೈತರ ಜೊತೆಗೂಡಿ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ