ಭರಮಣ್ಣನಾಯಕನ ಕೆರೆಗೆ ಮಲಿನ ನೀರು ಸೇರದಂತೆ ಮುನ್ನೆಚ್ಚರಿಕೆ | ಅದಕ್ಕಾಗಿ ಕೋಟಿ ರು. ಯೋಜನೆಕನ್ನಡಪ್ರಭ ವಾರ್ತೆ ಸಿರಿಗೆರೆ
ಗ್ರಾಮದ ಚರಂಡಿಗಳ ಮೂಲಕ ಹರಿದು ಬರುವ ಅಶುದ್ಧ ನೀರು ಕೆರೆಗಳನ್ನು ಸೇರಿ ಅಲ್ಲಿನ ನೀರು ಮಲಿನಯುಕ್ತವಾಗುವ ಕ್ರಮವನ್ನು ತಡೆಗಟ್ಟಲು ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ತಾಲ್ಲೂಕಿನ ಭರಮಸಾಗರ, ತುರುವನೂರು ಮತ್ತು ಹೊಸದುರ್ಗ ತಾಲ್ಲೂಕಿನ ಬೆಲಗೂರು ಕೆರೆಗಳು ಈ ಯೋಜನೆಯಲ್ಲಿ ಸೇರಿವೆ. ಅದಕ್ಕಾಗಿ ೭ ಕೋಟಿ ರೂ.ಗಳ ವಿಸ್ತ್ರತ ಯೋಜನೆಯನ್ನು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯ್ತಿಗಳು ಸಿದ್ಧಗೊಳಿಸುತ್ತಿರುವುದು ಈ ಕೆರೆಗಳ ಒಡನಾಟ ಇಟ್ಟುಕೊಂಡಿರುವ ಜನರಿಗೆ ಸಂತೋಷ ತಂದಿದೆ.
ಈ ಯೋಜನೆಯ ವಿಘ್ನಗಳು ನಿವಾರಣೆಯಾಗಿ ಇದು ರೂಪುಗೊಂಡರೆ ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆ ಶುದ್ಧ ನೀರಿನ ಜಲಪಾತ್ರೆಯಾಗಿ ಕಂಗೊಳಿಸಲಿದೆ.ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿಯ ಯೋಜನೆಯ ಫಲವಾಗಿ ಭರಮಸಾಗರದ ಕೆರೆಗೆ ೫೬ ಕಿ.ಮೀ. ದೂರದ ಹರಿಹರ ಸಮೀಪದ ದೀಟೂರು ಬಳಿಯ ತುಂಗಾಭದ್ರೆ ನದಿಯಿಂದ ಕಾಲುವೆ ಮೂಲಕ ನೀರು ಬರುತ್ತಿದೆ. ಹೀಗೆ ಭರಮಸಾಗರ ಕೆರೆಗೆ ಬಂದ ನೀರು ಅಲ್ಲಿಂದ ೪೨ ಕೆರೆಗಳಿಗೆ ಹರಿಯುತ್ತದೆ. ಇದರಿಂದ ಭರಮಸಾಗರ ಸುತ್ತಲಿನ ಪ್ರದೇಶಗಳ ಅಂತರಜಲ ಮಟ್ಟ ಸುಧಾರಿಸಿದೆ, ಜೊತೆಗೆ ರೈತ ಸಮುದಾಯದ ರೈತಾಪಿ ಚಟುವಟಿಕೆಗಳು ಇಮ್ಮಡಿಕೊಂಡಿವೆ. ಈ ತಟದಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಆದರೆ ಹೋಬಳಿ ಕೇಂದ್ರವಾದ ಭರಮಸಾಗರದ ಹಲವು ಬಡಾವಣೆಗಳಿಂದ ಹರಿದು ಬರುವ ಕೊಚ್ಚೆ ನೀರು ಎಗ್ಗಿಲ್ಲದೆ ಕೆರೆಯನ್ನು ಸೇರುತ್ತಿದೆ. ತರಳಬಾಳು ಐಸಿಆರ್ ಕೃಷಿ ವಿಜ್ಞಾನ ಕೇಂದ್ರದ ತಜ್ಞ ವಿಜ್ಞಾನಿಗಳು ಕೆರೆಗೆ ಭೇಟಿ ನೀಡಿ ಕೆರೆಯ ನೀರು ಅಶುದ್ಧಗೊಳ್ಳುತ್ತಿರುವುದರ ವರದಿಯನ್ನು ಜನರ ಮುಂದಿಟ್ಟಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಕೆರೆಯಲ್ಲಿನ ಜೀವರಾಶಿಗಳಿಗೂ ಕುತ್ತುಬರುತ್ತದೆ ಜೊತೆಗೆ ಕೆರೆಯು ಮಾಲಿನ್ಯದ ಹೊಂಡವಾಗುತ್ತದೆ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಮನದಟ್ಟು ಮಾಡಿದ್ದಾರೆ.
ಕೆರೆಯ ಅಂಗಳದಲ್ಲಿ 100 * 100 ಅಡಿ ನಿವೇಶನದಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕಿದೆ. ಅದಕ್ಕಾಗಿ ಸೂಕ್ತ ಜಾಗ ತುರ್ತಾಗಿ ಈ ಸಂಸ್ಥೆಗೆ ಬೇಕಾಗಿದೆ. ಅದಕ್ಕಾಗಿ ಸಂಸ್ಥೆಯ ಅಜಯ್ ಕುಮಾರ್ ಮತ್ತು ಸಂಗಡಿಗರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣಾ ಕೆಲಸವನ್ನು ಪೂರೈಸಿದ್ದಾರೆ. ಈ ಸಂಸ್ಥೆಗೆ ನಿವೇಶನ ದೊರಕಿಸಿಕೊಡಲು ಗ್ರಾಮ ಪಂಚಾಯ್ತಿ ಇಲ್ಲವೇ ಸಣ್ಣ ನೀರಾವರಿ ಇಲಾಖೆಗಳು ಮುಂದಾಗಬೇಕಾಗಿದೆ.