ತಾಳ್ಮೆಯಿಂದ ಸಂಘಟನಾತ್ಮಕ ಕೆಲಸ ಮಾಡಿದಾಗ ಉತ್ತಮ ಫಲಿತಾಂಶ: ಸತೀಶ್ ಕುಂಪಲ

KannadaprabhaNewsNetwork | Published : Sep 7, 2024 1:31 AM

ಸಾರಾಂಶ

೨೦೨೪ ನೇ ವರ್ಷ ಬಿಜೆಪಿ ಅಗ್ರಗಣ್ಯ ನಾಯಕ ವಾಜಪೇಯಿ ಅವರ ೧೦೦ ವರ್ಷದ ಜನ್ಮದಿನವೂ ಬರುತ್ತಿರುವುದರಿಂದ ಅವರು ಜಾರಿಗೊಳಿಸಿರುವ ಯೋಜನೆಗಳನ್ನು ೬ ಭಾನುವಾರ ಅಟಲ್ ಜಿ ಅಭಿವೃದ್ಧಿ ಪರ್ವ ಅಭಿಯಾನವಾಗಿ ಆಚರಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಪಕ್ಷದ ಸಂಘಟನಾತ್ಮಕ ಕೆಲಸದಲ್ಲಿ ಕಿರಿಕಿರಿ, ಗೊಂದಲ ಉಂಟಾಗುವುದು ಸಹಜ. ಅದರಲ್ಲೂ ಪುತ್ತೂರು ಒಂದಷ್ಟು ಸವಾಲಾಗಿದ್ದೂ ನಿಜ. ತಾಳ್ಮೆಯಿಂದ ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಫಲಿತಾಂಶವೂ ಉತ್ತಮವಾಗಿರುತ್ತದೆ. ಪುತ್ತೂರು ಕ್ಷೇತ್ರ ಜಿಲ್ಲೆಯಲ್ಲಿ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಸಂಘಟನಾತ್ಮಕವಾಗಿ ನಿರ್ವಹಿಸಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಅವರು ಪುತ್ತೂರು ಜೈನ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಮಂಡಲ ವ್ಯಾಪ್ತಿಯ ಸದಸ್ಯತನ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯಲ್ಲಿ ಒಂದು ಸಲ ಪದಾಧಿಕಾರಿಗಳನ್ನು ನೇಮಕ ಮಾಡಿದ ಬಳಿಕ ಗೊಂದಲಕ್ಕೆ ಅವಕಾಶಗಳಿಲ್ಲ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಹೊರತು ಬೇರೆ ಆಲೋಚನೆ ಮಾಡಬಾರದು. ಹಿರಿಯರ ಮಾರ್ಗದರ್ಶನ, ವಿಶ್ವಾಸ ಪಡೆದು ಪಕ್ಷದ ಕೆಲಸವನ್ನು ಮಾಡಬೇಕು. ೫೭ ಮಹಾಶಕ್ತಿ ಕೇಂದ್ರಕ್ಕೆ ಜವಾಬ್ದಾರಿ ಕೊಡುವಾಗ ಗಮನಿಸಿಯೇ ನೀಡಲಾಗಿದೆ. ಸಂಘಟನಾತ್ಮಕವಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ, ಸಂಘಟನೆಯ ದೂರದೃಷ್ಟಿಯ ನಿರ್ಧಾರ ಅಗತ್ಯವಿದೆ. ಜಿಲ್ಲೆಯು ಸದಸ್ಯತ್ವ ಅಭಿಯಾನದಲ್ಲಿ ೩ ನೇ ಸ್ಥಾನದಲ್ಲಿದೆ. ಸದಸ್ಯತ್ವ ಅಭಿಯಾನ ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆಸಬೇಕು. ಪ್ರತಿ ಬೂತ್‌ನಲ್ಲಿ ಮನೆ ಮನೆಗೆ ಹೋಗಿ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದರು. ಬಿಜೆಪಿ ಸದಸ್ಯತ್ವ ಅಭಿಯಾನ ಉತ್ಸವದ ರೀತಿಯಲ್ಲಿ ನಡೆಸಬೇಕು. ತಮಗೆ ಹಂಚಿಕೆ ಮಾಡಲಾದ ಜವಾಬ್ದಾರಿಗೆ ನ್ಯಾಯ ಕೊಡಬೇಕು. ನನ್ನ ಬೂತ್‌ನಲ್ಲಿ ನಾನು ಗುರಿ ಮುಟುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಪುತ್ತೂರು ನಗರೆಸಭೆ, ವಿಟ್ಲ ಪಟ್ಟಣ ಪಂಚಾಯಿತಿ, ಲೋಕಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಮುನ್ನಡೆಯು ಪಕ್ಷಕ್ಕೆ ಬಲ ತುಂಬಿವೆ. ಜಿಲ್ಲೆಯಲ್ಲಿ ಹೊಸತನದ ಪ್ರಯತ್ನ ನಡೆಸಲಾಗಿದೆ. ಪಕ್ಷದ ಜವಾಬ್ದಾರಿಯಲ್ಲಿದ್ದವರಿಗೂ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಆಯ್ಕೆಯ ಪಾಲುದಾರರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು. ಸದಸ್ಯತ್ವ ಅಭಿಯಾನದ ಜಿಲ್ಲೆಯ ಸಂಯೋಜಕ ವಿಕಾಸ್ ಪುತ್ತೂರು ಮಾತನಾಡಿ ಮೋದಿಯವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ೩ ದಿನಗಳಲ್ಲಿ ೧ ಕೋಟಿ ಸದಸ್ಯತ್ವ ಮಾಡಲಾಗಿದೆ. ೨ ಹಂತದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಅ.೧೫ ರ ತನಕ ನಡೆಯಲಿದೆ. ಸಶಕ್ತ ಬಿಜೆಪಿ, ವಿಕಸಿತ ಭಾರತ ನಮ್ಮ ಘೋಷಣೆ. ಸೆ.೧೧ ರಿಂದ ೧೭ ರ ತನಕ ಸದಸ್ಯತ್ವ ನೋಂದಣಿಯ ಮಹಾ ಅಭಿಯಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ೨೦೨೪ ನೇ ವರ್ಷ ಬಿಜೆಪಿ ಅಗ್ರಗಣ್ಯ ನಾಯಕ ವಾಜಪೇಯಿ ಅವರ ೧೦೦ ವರ್ಷದ ಜನ್ಮದಿನವೂ ಬರುತ್ತಿರುವುದರಿಂದ ಅವರು ಜಾರಿಗೊಳಿಸಿರುವ ಯೋಜನೆಗಳನ್ನು ೬ ಭಾನುವಾರ ಅಟಲ್ ಜಿ ಅಭಿವೃದ್ಧಿ ಪರ್ವ ಅಭಿಯಾನವಾಗಿ ಆಚರಿಸಲಿದ್ದೇವೆ ಎಂದು ಮಾಹಿತಿ ನೀಡಿದರು. ಮಾಜಿ ಶಾಸಕ ಸಂಜೀವ ಮಠಂದೂರು, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ದಯಾನಂದ ನಾಯ್ತೊಟ್ಟು, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರುವಾರು, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ, ಪುತ್ತೂರು ಪ್ರಭಾರಿ ಸುನಿಲ್ ಆಳ್ವ, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜೆರೆಮಾರು, ನಗರ ಮಂಡಲದ ಅಧ್ಯಕ್ಷ ಶಿವ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಉಮೇಶ್ ಕೋಡಿಬೈಲು, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಸಂಯೋಜಕ ನಿತೀಶ್ ಕುಮಾರ್ ಶಾಂತಿವನ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಸ್ವಾಗತಿಸಿದರು. ಹರಿಪ್ರಸಾದ್ ಯಾದವ್ ವಂದಿಸಿದರು. ಯುವರಾಜ್ ಪೆರಿಯತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು.

Share this article