ಸಕಲರಿಗೂ ಒಳಿತು ಹಾರೈಕೆ ಧರ್ಮಗಳ ಮೂಲ: ಅರಮೇರಿ ಶ್ರೀ

KannadaprabhaNewsNetwork |  
Published : Feb 12, 2024, 01:32 AM IST
ನಾಪೋಕ್ಲು ಬಳಿಯ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಅವರ ಉರೂಸ್ ಸಮಾರಂಭದ ಪ್ರಯುಕ್ತ ಶನಿವಾರದ ಸಂಜೆ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಅರಮೆರಿ ಕಳ೦ಚೇರಿ ಮಠದ ಶ್ರೀ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಅವರ ಉರೂಸ್ ಸಮಾರಂಭದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಸಕಲ ಜೀವಾತ್ಮಗಳಿಗೆ ಒಳಿತಾಗಬೇಕು ಎಂಬುದು ಎಲ್ಲಾ ಧರ್ಮಗಳ ಮೂಲ. ಸಮಾಜದಲ್ಲಿ ಎಲ್ಲರೂ ಒಳ್ಳೆಯವರಾಗಿ ಉತ್ತಮ ಪ್ರಪಂಚವನ್ನು ಕಟ್ಟಬೇಕು ಎಂದು ಅರಮೆರಿ ಕಳ೦ಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಅವರ ಉರೂಸ್ ಸಮಾರಂಭದ ಪ್ರಯುಕ್ತ ಶನಿವಾರದ ಸಂಜೆ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಜೀವನವನ್ನು ಸಂತೋಷದಿಂದ ಅನುಭವಿಸುವುದು ಹೇಗೆ ಆ ಸಂತೋಷದಲ್ಲಿ ನನ್ನೊಳಗೆ ನಾನು ಹುಡುಕಿಕೊಳ್ಳುವುದು ಹೇಗೆ ಎಂಬುದನ್ನು ನಮಗೆ ಎಲ್ಲ ಧರ್ಮಗಳು ಹೇಳಿಕೊಡಬೇಕು. ಸೌಹಾರ್ದಯುತ ಜೀವನ ನಡೆಸಲು ಸಂದೇಶ ನೀಡಿದ ಗುರುಗಳ ಮಹನೀಯರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಸ್ಥಳೀಯ ಮೇರಿ ಮಾತೆ ದೇವಾಲಯದ ಧರ್ಮಗುರುಗಳಾದ ಜ್ಞಾನ ಪ್ರಕಾಶ್ ಮಾತನಾಡಿ, ಮಹನೀಯರ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಂಡಾಗ ಸುಂದರ ಸಮಾಜವನ್ನು ಕಟ್ಟಿಕೊಳ್ಳಲು ಸಾಧ್ಯ ಮನುಷ್ಯತ್ವವನ್ನು ಕಳೆದುಕೊಂಡಾಗ ಸಮಾಜ ಹಾಳಾಗುತ್ತದೆ. ನಾವು ಈ ಭೂಮಿಯಲ್ಲಿ ಬದುಕಿರುವ ತನಕ ಉತ್ತಮರಾಗಿ ಬದುಕಬೇಕು ಎಂದರು.

ಕಾಫಿ ಬೆಳೆಗಾರ ಕುಡಿಯೋಣ ರಮೇಶ್ ಮಾತನಾಡಿ ಎಲ್ಲ ಧರ್ಮಗಳು ಉತ್ತಮವಾದದ್ದನ್ನೇ ಬೋಧಿಸುತ್ತವೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಕೊಡಗು ಖಾಝಿ ಅಬ್ದುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ ಪ್ರತೀಪ ಹಾಗೂ ಗಣ್ಯರು ಮಾತನಾಡಿದರು. ಕನ್ಯಾನದ ಸಿರಾಜುದ್ದೀನ್ ಸಖಾಫಿ ಧಾರ್ಮಿಕ ಮುಖ್ಯ ಪ್ರಭಾಷಣ ಮಾಡಿದರು. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಲಕ್ಷ್ಮೀ ವೆಂಕಟೇಶ್ವರ ದೇವಾಯಲದ ಅಧ್ಯಕ್ಷ ಟಿ. ಎಸ್. ಮಂಜಯ್ಯ, ಪಿ ಎ. ಅನೀಫ್‌ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷ ಪರವಂಡ ಜುಬೇರ್ ವಹಿಸಿದ್ದರು. ಚೆರಿಯಪರಂಬು ಮಸೀದಿಯ ಖತೀಬರಾದ ಹಂಝ ರಹ್ಮಾನಿ, ಚೆರಿಯ ಪರಂಬು ಜಮಾಅತ್‌ನ ಮಾಜಿ ಅಧ್ಯಕ್ಷರು,ಉಪಾಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು. ಜಮಾಯತ್ ಕಾರ್ಯದರ್ಶಿ ಪರವಂಡ ಸಿರಾಜ್ ಸ್ವಾಗತಿಸಿದರು. ಕೋಶಾಧಿಕಾರಿ ಬಶೀರ್‌ ಪಿ.ಎಚ್‌. ವಂದಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು