ಕನ್ನಡಪ್ರಭ ವಾರ್ತೆ ಸಾಗರ
ಬುಧವಾರ ಬೆಳಿಗ್ಗೆ ಬೇಸೂರಿನ ಬಸವಣ್ಣ ದೇವಸ್ಥಾನದಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿವರೆಗೂ ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದಯಾತ್ರೆಗೆ ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮತ್ತು ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಚಾಲನೆ ನೀಡಿದರು.
‘ಉರಿಗಾಗಿ, ನೀರಿಗಾಗಿ, ಉಸಿರಿಗಾಗಿ ಹಾಗೂ ಬದುಕಿಗಾಗಿ’ ಎಂಬ ಘೋಷಣೆಯೊಂದಿಗೆ ಆರಂಭವಾದ ಪಾದಯಾತ್ರೆಯಲ್ಲಿ ಅಯ್ಯೋಯ್ಯೋ ಬೇಡ್ವೇ ಬೇಡ ಅಣುಸ್ಥಾವರ ಯೋಜನೆ ಬೇಡ... ಏಸೂರು ಕೊಟ್ರೂ ಬೇಸೂರು ಕೊಡೆವು! ಎಂಬ ಹಾಡು ಮೊಳಗಿತುಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ , ಈಗ ಸಂಕಷ್ಟದ ಕಾಲ. ಇಂತಹ ಸಂದರ್ಭದಲ್ಲಿ ಮಲೆನಾಡಿನ ಜನ ಯಾವುದೇ ಪಕ್ಷ, ಪಂಗಡವಿಲ್ಲದೆ ಹೋರಾಡಬೇಕಿದೆ. ಈ ಮೂಲಕನಮ್ಮ ಬದುಕಿನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದರು.
ತಾಳಗುಪ್ಪ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶವಾದ ಮಲೆನಾಡಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಈಗಾಗಲೆ ಶರಾವತಿ ಸೇರಿದಂತೆ ಅನೇಕ ಜಲ ಯೋಜನೆಗಳಿಂದ ಮಲೆನಾಡು ಜನ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೇಸೂರು ಅಣುವಿದ್ಯುತ್ ಯೋಜನೆ ಜಾರಿಗೆ ಅವಕಾಶ ಕೊಡದೆ ಹೋರಾಟ ಮಾಡಬೇಕಿದೆ. ಜನರ ಸಂಘಟಿತ ಹೋರಾಟದ ಮುಂದೆ ಯಾವುದೇ ಸರ್ಕಾರವೂ ನಿರ್ಧಾರ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.
ಜನಪರ ಹೋರಾಟಗಾರರಾದ ತೀ.ನಾ. ಶ್ರೀನಿವಾಸ್, ಬೇಸೂರು ಅಣುವಿದ್ಯುತ್ ಯೋಜನೆ ವಿರೋಽ ಹೋರಾಟ ಸಮಿತಿ ಅಧ್ಯಕ್ಷ ಇಂದೂಧರ ಗೌಡ, ತುಮರಿ ಜಿ.ಟಿ ಸತ್ಯನಾರಾಯಣ, ದಿನೇಶ್ ಶಿರವಾಳ, ನಾಗೇಂದ್ರ ಸಾಗರ, ಬಂದಗದ್ದೆ ರಾಧಾಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಚರಕ ಸಂಸ್ಥೆಯ ಪ್ರಕಾಶ್ ಕುಗ್ವೆ ಸೇರಿದಂತೆ ಚರಕ ಸಂಸ್ಥೆ ಪ್ರತಿನಿಧಿಗಳು, ರೈತರು, ಪರಿಸರಾಸಕ್ತರು, ಗ್ರಾಮಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಸಾರ್ವಜನಿಕರು ವಿವಿಧ ಸ್ಥಳಗಳಲ್ಲಿ ಪಾದಯಾತ್ರೆಗೆ ಸೇರ್ಪಡೆಗೊಂಡು ಬೆಂಬಲ ವ್ಯಕ್ತಪಡಿಸಿದರು.