ನಕಲಿ ದಾಖಲೆಗಳ ತಯಾರಿಕೆ ಜಾಲ ಪತ್ತೆ, ಆರೋಪಿ ಬಂಧಿಸಿದ ಬೆಟಗೇರಿ ಪೊಲೀಸರು

KannadaprabhaNewsNetwork |  
Published : Nov 15, 2025, 02:00 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ನ. 13ರಂದು ಸಂಜೆ ಬೆಟಗೇರಿ ಬಡಾವಣೆ ಠಾಣಾ ವ್ಯಾಪ್ತಿಯ ಹಾತಲಗೇರಿ ನಾಕಾ ಹತ್ತಿರವಿರುವ ಕಬಾಡಿ ಎಡಿಟಿಂಗ್ ಫೋಟೋ ಸ್ಟುಡಿಯೋ ಮೇಲೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡವು, ಸ್ಟುಡಿಯೋ ಮಾಲೀಕ, ರಾಜೀವಗಾಂಧಿ ನಗರ ನಿವಾಸಿ ರಾಘವೇಂದ್ರಸಾ ಪರಶುರಾಮಸಾ ಕಬಾಡಿ(42) ಎಂಬಾತನನ್ನು ವಶಕ್ಕೆ ಪಡೆದಿದೆ.

ಗದಗ: ನಕಲಿ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಸೇರಿದಂತೆ ಇತರೆ ಸರ್ಕಾರಿ ಗುರುತಿನ ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ವಿಶೇಷ ತಂಡವು ಭೇದಿಸಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಕಲಿ ದಾಖಲೆಗಳ ತಯಾರಿಕೆ ಮತ್ತು ಮಾರಾಟದ ಬಗ್ಗೆ ಸಾರ್ವಜನಿಕರಿಂದ ಸಿಕ್ಕ ಖಚಿತ ಮಾಹಿತಿಯ ಆಧಾರದ ಮೇಲೆ, ಗದಗ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಬೆಟಗೇರಿ ವೃತ್ತದ ಸಿಪಿಐ ಧೀರಜ್ ಸಿಂಧೆ, ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಜೋಗದಂಡಕರ ತಂಡದ ನೇತೃತ್ವ ವಹಿಸಿದ್ದರು.

ನ. 13ರಂದು ಸಂಜೆ ಬೆಟಗೇರಿ ಬಡಾವಣೆ ಠಾಣಾ ವ್ಯಾಪ್ತಿಯ ಹಾತಲಗೇರಿ ನಾಕಾ ಹತ್ತಿರವಿರುವ ಕಬಾಡಿ ಎಡಿಟಿಂಗ್ ಫೋಟೋ ಸ್ಟುಡಿಯೋ ಮೇಲೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡವು, ಸ್ಟುಡಿಯೋ ಮಾಲೀಕ, ರಾಜೀವಗಾಂಧಿ ನಗರ ನಿವಾಸಿ ರಾಘವೇಂದ್ರಸಾ ಪರಶುರಾಮಸಾ ಕಬಾಡಿ(42) ಎಂಬಾತನನ್ನು ವಶಕ್ಕೆ ಪಡೆದಿದೆ. ಆರೋಪಿ ಹಣದಾಸೆಗಾಗಿ ಸಾರ್ವಜನಿಕರಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ನೈಜ ದಾಖಲೆಗಳಂತೆ ಬಳಸಲು ನೀಡಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದ ಎಂದರು.

ಪ್ರಕರಣವನ್ನು ಭೇದಿಸುವಲ್ಲಿ ಸಿಬ್ಬಂದಿಗಳಾದ ಎನ್.ಡಿ. ಹುಬ್ಬಳ್ಳಿ, ಸಂತೋಷ ಡೋಣಿ, ಪರಶುರಾಮ ದೊಡಮನಿ, ಪ್ರವೀಣ ಕಲ್ಲೂರ ಮತ್ತು ವಾಹನ ಚಾಲಕ ಖಯುಂ ಲಕ್ಕುಂಡಿ ಅವರ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಡರಗಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಮುಂಡರಗಿ: ಬಿಹಾರದಲ್ಲಿ ಎನ್‌ಡಿಎ ಬಿಜೆಪಿ ಮೈತ್ರಿ ಪಕ್ಷಕ್ಕೆ ಅತ್ಯಂತ ಹೆಚ್ಚಿನ ಬಹುಮತ ಪಡೆದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎಸ್. ಗಡ್ಡದ, ಮೈಲಾರಪ್ಪ ಕಲಕೇರಿ, ರವಿ ಲಮಾಣಿ, ಬಿ.ಎಸ್. ಸಸಿಮಠ, ಅಶೋಕ ಚೂರಿ, ಸೋಮು ಹಕ್ಕಂಡಿ, ಸುಭಾಸ ಕ್ವಾಟಿ, ಓಂಪ್ರಕಾಶ ಲಿಂಗಶೆಟ್ಟರ, ಆನಂದ ಕೊರ್ಲಹಳ್ಳಿ, ರಮೇಶ ಹುಳಕಣ್ಣವರ, ಬಸವರಾಜ ಚಿಗಣ್ಣವರ, ಮಹೇಶ ದೇಸಾಯಿ, ವಸಂತ ನಾಯಕ, ಬಸನಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PREV

Recommended Stories

ಇಂದಿನ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕು-ರಮೇಶ ಅರಗೋಳ
ಧೂಳಿಪಟ ಆಗಲಿದೆ ಕಾಂಗ್ರೆಸ್: ಮುತಾಲಿಕ್‌