ಒಳಮೀಸಲಾತಿ ಹೆಸರಲ್ಲಿ ಕಾಂಗ್ರೆಸ್‌ನಿಂದ ದ್ರೋಹ

KannadaprabhaNewsNetwork |  
Published : Jul 06, 2026, 01:15 AM IST
ಚಿತ್ರ ವಿವರ : ಚಿತ್ರದುರ್ಗ ನಗರದಲ್ಲಿ  ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾದಿಗ ಜನಾಂಗದ ಪೂರ್ವಭಾವಿ ಸಭೆಯನ್ನುಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ ಉದ್ಘಾಟಿಸಿದರು,  | Kannada Prabha

ಸಾರಾಂಶ

ಮಾದಿಗ ಜನಾಂಗದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ ಆರೋಪ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದಲಿತ ಸಮಾಜದವರಿಗೆ ಒಳ ಮೀಸಲಾತಿ ನೀಡಿರುವುದಾಗಿ ಕಾಂಗ್ರೆಸ್‌ ಪಕ್ಷ ಬೊಬ್ಬೆ ಹೊಡೆಯುತ್ತಿದೆ. ಆದರೆ ಒಳ ಮೀಸಲಾತಿ ಹೆಸರಿನಲ್ಲಿ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ ಹೇಳಿದರು.

ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾದಿಗ ಜನಾಂಗದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದ ಮೇಲೂ ಒಳಮೀಸಲಾತಿ ಜಾರಿ ಮಾಡಲು ಮೀನಾಮೇಷ ಎಣಿಸಿತು. ಈಗ ಮೀಸಲಾತಿ ಪ್ರಮಾಣ ಕಡಿತಗೊಳಿಸಿ ಒಳ ಮೀಸಲಾತಿ ನೀಡುವ ಮೂಲಕ ಮಾದಿಗ ಸಮಾಜಕ್ಕೆ ದ್ರೋಹ ಮಾಡಿದೆ ಎಂದು ಕಿಡಿಕಾರಿದರು.

ಬಿಜೆಪಿ ಪಕ್ಷವು ಅತಿಚಿಕ್ಕ ಸಮಾಜಗಳಿಗೆ ಆದ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ಸಮಾಜಗಳಿಗೆ ಸಮರ್ಪಕವಾಗಿ ಒಳಮೀಸಲಾತಿ ಹಂಚಿಕೆ ಮಾಡಿತ್ತು.

ಆದರೆ ಗ್ಯಾರಂಟಿಗಳ ಆಮಿಷ ತೋರಿಸಿ ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷ ಒಳಮೀಸಲಾತಿ ಜಾರಿ ಮಾಡುವಲ್ಲಿ ತಾರತಮ್ಯ ಮಾಡಿತು. ಈ ಕುರಿತು ಮಾದಿಗ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಗಂಭೀರ ಚಿಂತನೆ ಮಾಡಬೇಕು. ಅಲ್ಲದೇ ನಮ್ಮ ಮುಂದಿನ ಪೀಳಿಗೆಯ ಜನರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್ ಮಾತನಾಡಿ, ಬಿಜೆಪಿ ಒಂದು ಕಾಲದಲ್ಲಿ ಬ್ರಾಹ್ಮಣರ ಪಕ್ಷ ಎಂಬ ಭಾವನೆ ಇತ್ತು. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇಂತಹ ಭಾವನೆಗಳು ಸುಳ್ಳಾಗಿವೆ. ಹಿಂದುಳಿದವರು ಸೇರಿದಂತೆ ಶೋಷಿತ ಸಮುದಾಯದವರು ಬೆಳೆಯಲು ಬಿಜೆಪಿ ಪಕ್ಷದಲ್ಲಿ ಮಾತ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಅನೇಕ ತಳ ಸಮುದಾಯದ ಜನರಿಗೆ ಪ್ರಶಸ್ತಿಗಳು ಲಭಿಸಿವೆ. ಹಾಗಾಗಿ ಮಾದಿಗ ಸಮುದಾಯದವರು ಬಿಜೆಪಿ ಬೆಂಬಲಿಸುವ ಮೂಲಕ ಅಭಿವೃದ್ಧಿ

ಸಾಧಿಸಬೇಕು. ಈ ಕುರಿತು ಕಾರ್ಯಕರ್ತರು ಸಂಕಲ್ಪ ಮಾಡಬೇಕೆಂದು ಸಲಹೆ ಮಾಡಿದರು.

ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ, ಶೋಷಿತರು ಕಾಂಗ್ರೆಸ್‌ ನಂಬಿಕೊಂಡು ಕುಳಿತಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಶೋಷಿತರ ಉದ್ಧಾರ ಆಗುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಸುಳ್ಳು

ಹೇಳುವ ಮೂಲಕ ಶೋಷಿತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಆದರೆ ಸಂವಿಧಾನ ತಿರುಚಿ ತುರ್ತು ಪರಿಸ್ಥಿತಿ ಜಾರಿ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡದ್ದು ಕಾಂಗ್ರೆಸ್.

ಆದರೆ ಎ.ನಾರಾಯಣಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದು, ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಬಿಜೆಪಿ, ಈ ಕುರಿತು ಮಾದಿಗ ಸಮಾಜ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು. ತಾಪಂ ಮಾಜಿ ಅಧ್ಯಕ್ಷ ಜಯಪ್ಪ, ಬಿಜೆಪಿ ಎಸ್‌ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ನಾಗರಾಜ್,

ನಿವೃತ್ತ ಪ್ರಾಧ್ಯಾಪಕ ನಾಗರಾಜ್, ಚೇತನ್, ಪ್ರಹ್ಲಾದ್ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಹಕ ಸ್ನೇಹಿ ಸೇವೆಯೇ ಎಸ್‌ಬಿಐ ಯಶಸ್ಸಿನ ಗುಟ್ಟು
ಶೂ ವಿತರಣೆಯ ಹೊಣೆ ಶಿಕ್ಷಕರಿಗೆ ಬೇಡ