ಟ್ರಾಫಿಕ್‌ ನಿವಾರಿಸುವ ಹಿನ್ನೆಲೆ ಬೆಟ್ಟಹಲಸೂರು-ರಾಜಾನುಕುಂಟೆ ಬೈಪಾಸ್‌ಯೋಜನೆಗೆ ರೈಲ್ವೆ ಮಂಡಳಿ ಮಂಜೂರಾತಿ

KannadaprabhaNewsNetwork |  
Published : Dec 17, 2024, 01:45 AM ISTUpdated : Dec 17, 2024, 07:35 AM IST
Train

ಸಾರಾಂಶ

ನಗರದ ರೈಲ್ವೇ ನಿಲ್ದಾಣಗಳಲ್ಲಿ ರೈಲುಗಳ ಟ್ರಾಫಿಕ್‌ ಒತ್ತಡ ನಿವಾರಿಸುವ ಹಿನ್ನೆಲೆಯಲ್ಲಿ ₹ 248 ಕೋಟಿ ವೆಚ್ಚದಲ್ಲಿ ಬೆಟ್ಟ ಹಲಸೂರು - ರಾಜಾನುಕುಂಟೆ ನಡುವೆ ರೈಲ್ವೇ ಬೈಪಾಸ್ ಲೈನ್‌ (ಕಾರ್ಡ್‌ ಲೈನ್‌) ನಿರ್ಮಾಣದ ಯೋಜನೆಗೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿದೆ.

ಮಯೂರ್‌ ಹೆಗಡೆ

 ಬೆಂಗಳೂರು :ನಗರದ ರೈಲ್ವೇ ನಿಲ್ದಾಣಗಳಲ್ಲಿ ರೈಲುಗಳ ಟ್ರಾಫಿಕ್‌ ಒತ್ತಡ ನಿವಾರಿಸುವ ಹಿನ್ನೆಲೆಯಲ್ಲಿ ₹ 248 ಕೋಟಿ ವೆಚ್ಚದಲ್ಲಿ ಬೆಟ್ಟ ಹಲಸೂರು - ರಾಜಾನುಕುಂಟೆ ನಡುವೆ ರೈಲ್ವೇ ಬೈಪಾಸ್ ಲೈನ್‌ (ಕಾರ್ಡ್‌ ಲೈನ್‌) ನಿರ್ಮಾಣದ ಯೋಜನೆಗೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿದೆ.

ಸುಮಾರು 6.14 ಕಿಮೀ ಅಂತರದ ಯೋಜನೆ ಇದಾಗಿದ್ದು, ಸರಕು ಸಾಗಣೆ ರೈಲು ಹಾಗೂ ಪ್ಯಾಸೆಂಜರ್‌ ರೈಲುಗಳು ಬೈಪಾಸ್ ನಲ್ಲಿ ಓಡಾಡುವುದರಿಂದ ನಿಲ್ದಾಣದಲ್ಲಿ ಇತರೆ ರೈಲುಗಳ ಸಂಚಾರ ಸುಗಮವಾಗಿರಲಿದೆ. ಇಲ್ಲಿ ಜೋಡಿಹಳಿ ರೈಲು ಯೋಜನೆಗೆ 2022ರಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಸರ್ವೇ, ಕಾರ್ಯಸಾಧ್ಯತಾ ಅಧ್ಯಯನ ನಡೆಸಿ, ಯೋಜನೆ ರೂಪಿಸಿ ಒಪ್ಪಿಗೆ ನೀಡುವಂತೆ ರೈಲ್ವೆ ಮಂಡಳಿಗೆ ಪತ್ರ ಬರೆದಿತ್ತು. ಆಗ 2024ರ ಡಿಸೆಂಬರ್‌ ಒಳಗೆ ಈ ಮಾರ್ಗ ನಿರ್ಮಿಸುವ ಗುರಿ ಹೊಂದಗಲಾಗಿತ್ತು. ಆದರೆ, ಈಗ ಸಿಂಗಲ್‌ ಲೈನ್‌ ಯೋಜನೆಗೆ ಒಪ್ಪಿಗೆ ನೀಡಿರುವ ರೈಲ್ವೆ ಮಂಡಳಿಯು ಹಳಿ ನಿಲ್ದಾಣ ಸೇರಿ ಸಿವಿಲ್‌ ಕಾಮಗಾರಿಗೆ ₹213.46 ಕೋಟಿ, ಸಿಗ್ನಲ್‌ ಕಾಮಗಾರಿಗೆ ₹ 21.14 ಕೋಟಿ, ಎಲೆಕ್ಟ್ರಿಕಲ್‌ ಕಾಮಗಾರಿಗೆ ಸುಮಾರು ₹13 ಕೋಟಿ ಸೇರಿ ಒಟ್ಟಾರೆ ₹248.24 ಕೋಟಿ ಅನುದಾನ ಮಂಜೂರು ಮಾಡಿದೆ.

ಹೇಗೆ ಪ್ರಯೋಜನ?:

ರೈಲ್ವೆಗೆ ಪ್ರಯಾಣಿಕ ರೈಲಿಗಿಂತ ಹೆಚ್ಚಾಗಿ ಸರಕು ಸಾಗಣೆ ರೈಲುಗಳ ಮಾರ್ಗ ಬದಲಾವಣೆಗೆ ಈ ಕಾರ್ಡ್‌ ಲೈನ್‌ ಹೆಚ್ಚು ಅನುಕೂಲ ಕಲ್ಪಿಸಲಿದೆ. ನಗರದಲ್ಲಿ ಯಲಹಂಕದಿಂದ ಬಂಗಾರಪೇಟೆಗೆ ಹೊರಡುವ ಗೂಡ್ಸ್ ರೈಲಿನ ಟ್ರಾಫಿಕ್‌ ಕಡಿಮೆಯಾಗಲಿದೆ. ನಮ್ಮಲ್ಲಿ ಪ್ರತ್ಯೇಕವಾಗಿ ಸರಕು ಸಾಗಣೆ ಕಾರಿಡಾರ್‌ ಇಲ್ಲದಿರುವುದರಿಂದ ಇಂತಹ ಬೈಪಾಸ್‌ಗಳು ಹೆಚ್ಚು ಅನುಕೂಲ ಆಗಲಿವೆ.

ಈ ಕಾರ್ಡ್‌ ಲೈನ್‌, ಚೆನ್ನೈ ಬಂದರಿಂದ ಬರುವ ಸರಕು ರೈಲುಗಳು ಬಳ್ಳಾರಿ, ಧರ್ಮಾವರಂ, ಹಿಂದುಪುರ, ಗೌರಿಬಿದನೂರು ದೊಡ್ಡಬಳ್ಳಾಪುರ ರಾಜಾನುಕುಂಟೆ ಕಡೆಯಿಂದ ಕಾರ್ಡ್‌ ಲೈನ್‌ ಮೂಲಕ ಬೆಟ್ಟಹಲಸೂರು, ಏರ್‌ಪೋರ್ಟ್‌, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಶ್ರೀನಿವಾಸಪುರ ಮೂಲಕ ಕೋಲಾರದಿಂದ ಬಂಗಾರಪೇಟೆಗೆ ಹೋಗಲಿದೆ. ಇತ್ತ ಬಂಗಾರಪೇಟೆಯಿಂದ ಬಂದು ಹೋಗುವ ಸರಕು ಅದಲ್ಲದೆ, ವೈಟ್‌ಫೀಲ್ಡ್‌ ನಲ್ಲಿರುವ ಇನ್‌ಲ್ಯಾಂಡ್‌ ಕಂಟೈನರ್‌ ಡಿಪೋದ ಸರಕು ಸಾಗಣೆ ರೈಲುಗಳಿಗೂ ಈ ಮಾರ್ಗ ಅನುಕೂಲ ಆಗಲಿದೆ.

ಇನ್ನು ಯಲಹಂಕ, ಕೃಷ್ಣರಾಜಪುರಂ ಮೂಲಕ ಬರುವ ಪ್ರಯಾಣಿಕ ರೈಲುಗಳು, ನಗರದಿಂದ ಬಂದು ಹೋಗುವ ಡೆಮು, ಮೆಮು ರೈಲುಗಳು ವಿಳಂಬ, ಮಾರ್ಗಮಧ್ಯೆ ನಿಯಂತ್ರಣ ಆಗುವುದು ತಪ್ಪಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ಕೋಲಾರ-ಬೆಂಗಳೂರು, ಕೋಲಾರ-ಕಂಟೋನ್ಮೆಂಟ್‌ ಡೆಮು ರೈಲುಗಳು ಓಡಾಡುತ್ತಿವೆ. ಚಿಕ್ಕಬಳ್ಳಾಪುರ, ಏರ್‌ಪೋರ್ಟ್‌ ಕಡೆಗೆ ಹೋಗುವ ರೈಲುಗಳು ಓಡಾಡುತ್ತಿವೆ. ಹೀಗಾಗಿ ಈಗ ಸಿಂಗಲ್‌ ಲೈನ್‌ ಸಾಕಾಗಬಹುದು, ಆದರೆ, ಮುಂದಿನ ದಿನಗಳಲ್ಲಿ ಜೋಡಿಹಳಿ ಆಗಬೇಕಾಗುತ್ತದೆ ಎಂದು ರೈಲ್ವೆ ಸಾರಿಗೆ ತಜ್ಞರು ಹೇಳುತ್ತಾರೆ.

ಸಬ್‌ಅರ್ಬನ್‌ ರೈಲಿಗೆ ಲಿಂಕ್‌

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ಅನುಷ್ಠಾನಗೊಳಿಸುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ನಾಲ್ಕನೇ ಕಾರಿಡಾರ್‌ ಹೀಲಲಿಗೆ-ರಾಜಾನುಕುಂಟೆ ( 46.24ಕಿಮೀ) ಯೋಜನೆಗೆ ಈ ಬೈಪಾಸ್‌ ಲೈನ್‌ ಲಿಂಕ್‌ ಆಗಿಸುವ ಅವಕಾಶವೂ ಇದೆ. ಹೀಗಾದಲ್ಲಿ ಬೈಪಾಸ್‌ ಲೈನ್‌ ನಲ್ಲಿ ಪ್ರಯಾಣಿಕರು ಉಪನಗರ ರೈಲಿಗೆ ಬಂದು ಇಂಟರ್‌ಚೇಂಜ್‌ ನಿಲ್ದಾಣದ ಮೂಲಕ ನಗರಕ್ಕೆ ಬಂದು ಹೋಗುವುದು ಸುಲಭವಾಗಲಿದೆ ಎಂದು ರೈಲ್ವೆ ಸಾರಿಗೆ ತಜ್ಞರು ಹೇಳಿದ್ದಾರೆ. ಇದರ ಜೊತೆಗೆ ಭವಿಷ್ಯದ ಹೊರವರ್ತುಲ ರೈಲು ಯೋಜನೆಗೂ ಈ ಬೈಪಾಸ್‌ ಅನುಕೂಲ ಆಗಲಿದೆ.

ಬೆಟ್ಟಹಲಸೂರು ರಾಜಾನುಕುಂಟೆ ಯೋಜನೆ ಸರಕು ವಾಹನಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಇದರಿಂದ ನಗರದಲ್ಲಿ ಪ್ಯಾಸೆಂಜರ್‌ ರೈಲುಗಳ ಸುಗಮ ಓಡಾಟ ಸಾಧ್ಯವಾಗುತ್ತದೆ.

- ಕೆ.ಎನ್‌.ಕೃಷ್ಣಪ್ರಸಾದ್‌, ರೈಲ್ವೆ ಸಾರಿಗೆ ತಜ್ಞ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ