ಬಿಜಿಎಸ್ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಕನ್ನಡಪ್ರಭ ವಾರ್ತೆ ಅರಕಲಗೂಡು
ಉನ್ನತ ಜ್ಞಾನವನ್ನು ಗಳಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಕೇವಲ ಅಂಕಗಳಿಕೆಗಷ್ಟೆ ಮಹತ್ವ ನೀಡದೆ ಆಳವಾದ ಅಧ್ಯಯನ ಮತ್ತು ಅಗತ್ಯವಾದ ಕೌಶಲ್ಯವನ್ನು ಪಡೆಯುವ ಕುರಿತು ಚಿಂತನೆ ನಡೆಸಬೇಕು. ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ನಡೆಸಿದಾಗ ಸಾಧನೆ ಸಾಧ್ಯ, ಇಲ್ಲದಿದ್ದಲ್ಲಿ ಯಾವುದೇ ಕೋರ್ಸ್‌ಗಳನ್ನು ಪಡೆದರೂ ಪ್ರಯೋಜನವಿಲ್ಲ. ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿದುಕೊಳ್ಳಲು ಪತ್ರಿಕೆ ಓದುವುದನ್ನು ರೂಢಿಸಿಕೊಂಡಾಗ ಜ್ಞಾನ ಹೆಚ್ಚಿ ಓದಿಗೆ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ. ದ್ವಿತೀಯ ಪಿಯು ವಿದ್ಯಾರ್ಥಿ ಜೀವನದ ಪ್ರಮಖ ಘಟ್ಟ, ಈ ಹಂತದಲ್ಲಿ ಉತ್ತಮ ಸಾಧನೆ ಮಾಡಿದಾಗ ಭವಿಷ್ಯದ ಉನ್ನತ ಶಿಕ್ಷಣಕ್ಕೆ ನೆರವಾಗುಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯತೆ, ವಿವೇಕವನ್ನು ಮೈಗೂಡಿಸಿಕೊಂಡು ಪೋಷಕರು ಇಟ್ಟಿರುವ ಭರವಸೆ ಹಾಗೂ ಕನಸುಗಳನ್ನು ಸಾಕಾರಗೊಳಿಸಬೇಕು. ಯಾವುದೇ ವೃತ್ತಿ ಮಾಡಿದರೂ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಲಭಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಆದಿಚುಂಚನಗಿರಿ ಬಿಜಿಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲೆ ಬಿ.ಎನ್. ಶೋಭಾ ಎಂಜಿನಿಯರಿಂಗ್ ಶಿಕ್ಷಣದಲ್ಲಿನ ಆಯ್ಕೆಗಳ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಮಹೇಶ್ ಹೊಡೆನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ವಿಭಾಗದ ಜಿ.ಎಸ್. ಉದಯ್ ಮತ್ತು ವಾಣಿಜ್ಯ ವಿಭಾಗದ ಎಚ್.ಎಸ್. ಇಂಚರ ಅವರನ್ನು ವರ್ಷದ ವಿದ್ಯಾರ್ಥಿಗಳಾಗಿ ಆಯ್ಕೆ ಮಾಡಿ ಅಭಿನಂದಿಸಲಾಯಿತು. ರೋಟರಿ ಅಧ್ಯಕ್ಷ ಪ್ರಭು ಶ್ರೀಧರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆದವು.ಅರಕಲಗೂಡಿನ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು.