ಒಳ್ಳೆಯ ಶಿಕ್ಷಣದಿಂದ ಉತ್ತಮ ಭವಿಷ್ಯ: ಪರ್ತಗಾಳಿ ಶ್ರೀ

KannadaprabhaNewsNetwork |  
Published : Feb 17, 2025, 12:35 AM IST
ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸವನ್ನು ಪರ್ತಗಾಳಿಯ ವಿದ್ಯಾಧೀಶ ತೀರ್ಥ ಸ್ವಾಮೀಜಿ ನೆರವೇರಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಬೇರೆ ಕಡೆ ಗಮನ ಹರಿಸದೇ ಕೇವಲ ವಿದ್ಯಾರ್ಜನೆಯಡೆಗೆ ಮಾತ್ರ ಗಮನ ಹರಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಆಕಾಶದೆತ್ತರಕ್ಕೆ ಏರಲು ಸಾಧ್ಯ.

ಭಟ್ಕಳ: ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸವನ್ನು ಶುಕ್ರವಾರ ಮಧ್ಯಾಹ್ನ ಗೋಕರ್ಣ ಪರ್ತಗಾಳಿಯ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನೆರವೇರಿಸಿದರು.

ನಂತರ ಆಶೀರ್ವಚನ ನೀಡಿದ ಸ್ವಾಮೀಜಿಯವರು, ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಬೇರೆ ಕಡೆ ಗಮನ ಹರಿಸದೇ ಕೇವಲ ವಿದ್ಯಾರ್ಜನೆಯಡೆಗೆ ಮಾತ್ರ ಗಮನ ಹರಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಆಕಾಶದೆತ್ತರಕ್ಕೆ ಏರಲು ಸಾಧ್ಯ. ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮಂಚೂಣಿಯಲ್ಲಿದೆ. ಇದೀಗ ಟ್ರಸ್ಟ್‌ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ನೂತನ ಪಿಯು ಕಾಲೇಜು ಕಟ್ಟಡವನ್ನು ನಿರ್ಮಾಣ ಮಾಡುತ್ತಿದೆ. ಒಂದು ಉತ್ತಮ ಸಂಸ್ಥೆಗೆ ಉತ್ತಮ ಕಟ್ಟಡವೂ ಅಗತ್ಯವಾಗಿದೆ ಎಂದರು.ನೂತನ ಕಾಲೇಜು ಕಟ್ಟಡ ನಿರ್ಮಾಣವಾದರೆ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಉತ್ತಮವಾಗಿ ಶಿಕ್ಷಣ ಪಡೆದು ಕಾಲೇಜಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಮತ್ತು ಉತ್ತಮ ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನಡೆದುಬಂದ ದಾರಿ ಹಾಗೂ ಇದರ ಮುನ್ನೋಟವನ್ನು ಪ್ರಸ್ತುತಪಡಿಸಿದರು.

ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ವಿ. ನಾಯಕ, ಉಪಾಧ್ಯಕ್ಷ ಸುರೇಂದ್ರ ಶ್ಯಾನುಭಾಗ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಟ್ರಸ್ಟಿಗಳಾದ ಶ್ರೀಧರ ಶ್ಯಾನಭಾಗ, ರಮೇಶ ಖಾರ್ವಿ, ಗುರುದತ್ತ ಶೇಟ್, ಹಾಗೂ ಟ್ರಸ್ಟಿನ ಎಲ್ಲ ಅಂಗ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. ಟ್ರಸ್ಟಿ ನಾಗೇಶ ಭಟ್ಟ ವಂದಿಸಿದರು.

ಇಂದಿನಿಂದ ಗ್ರಾಮದೇವಿ ವಾರ್ಷಿಕೋತ್ಸವ

ಯಲ್ಲಾಪುರ: ಪಟ್ಟಣದ ಪ್ರಸಿದ್ದ ಕಾಳಮ್ಮಾನಗರದ ಗ್ರಾಮದೇವಿ ದೇವಸ್ಥಾನದ ೩೯ನೇ ವಾರ್ಷಿಕೋತ್ಸವ ಫೆ. ೧೭ ಹಾಗೂ ೧೮ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಉದಯ ನಾಯ್ಕ ತಿಳಿಸಿದರು.

ಭಾನುವಾರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿ, ಉತ್ಸವ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದರು.ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಮಾತನಾಡಿ, ಫೆ. ೧೭ರಂದು ಚಂಡಿಕಾಪಾಠ, ಸಂಜೆ ೬ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ. ೧೮ರಂದು ನವಚಂಡಿಕಾ ಹವನ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಪ್ರಸಿದ್ಧ ಕಲಾವಿದರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾದ ಸೂರಜ್ ಶೆಟ್ಟಿ, ನಾಗೇಶ ಬೋವಿವಡ್ಡರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ