ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ, ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ
ಆಧುನಿಕ ಯುಗದಲ್ಲಿ ಮನುಷ್ಯ ದೈನಂದಿನ ಕಾರ್ಯಗಳ ಮಧ್ಯೆ ಒತ್ತಡ ಅನುಭವಿಸಬೇಕಾಗುತ್ತಿದೆ. ಇದರಿಂದ ಹೊರಬರಲು ಜೀವನ ಶೈಲಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕು. ಅದು ಉತ್ತಮ ಆರೋಗ್ಯ ಹೊಂದಲೂ ಸಹಾಯಕವಾಗಿದೆ ಎಂದು ನಗರದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದರು.ಅವರು ಶುಕ್ರವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಉಡುಪಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಗಳೂರಿನ ಯೇನೆಪೋಯ ಮೆಡಿಕಲ್ ಕಾಲೇಜು, ಲಯನ್ಸ್ ಕ್ಲಬ್, ಉಡುಪಿ ಮಿಡ್ ಟೌನ್ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಜಿಲ್ಲೆ ಆಶ್ರಯದಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ ಹಾಗೂ ಮಹಿಳಾ ಸ್ವಾಸ್ಥ್ಯ ತಪಾಸಣೆ ಮತ್ತು ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಸಮುದಾಯದ ರೋಗಗಳು ಹೆಚ್ಚಾಗಿ ಬರುತ್ತಿದ್ದು, ಇಂದು ವೈಯಕ್ತಿಕ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಶೇ.4ರಷ್ಟು ಜನರಲ್ಲಿ ರಕ್ತದೊತ್ತಡ, ಶೇ.5ರಷ್ಟು ಜನರಿಗೆ ಮಧುಮೇಹ ಪತ್ತೆಯಾಗುತ್ತಿದೆ. ಕಳೆದ 2-3 ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಯುವಜನರ ಪ್ರಮಾಣ ಹೆಚ್ಚುತ್ತಿದೆ. ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ, ಕೃತಕ ಉಸಿರಾಟ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಅವಶ್ಯವಿದೆ. ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗಮುಕ್ತರಾಗಲು ಸಾಧ್ಯ ಎಂದರು.ಕ್ಯಾನ್ಸರ್ ತಜ್ಞೆ ಡಾ. ವಿನುತಾ ಮಾತನಾಡಿದರು. ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲೂಯಿಸ್ ಲೋಬೋ ಅಧ್ಯಕ್ಷತೆ ವಹಿಸಿದ್ದರು.