ಕನ್ನಡಪ್ರಭ ವಾರ್ತೆ ಹಲಗೂರು
ದೇವಾಲಯಗಳಿಗೆ ಹೋಗಿ ಹೆಚ್ಚು ಹೊತ್ತು ನಿಲ್ಲುವ ಬದಲು ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದುವುದರಿಂದ ನಿಮಗೆ ಜ್ಞಾನಾರ್ಜನೆ ಹಾಗೂ ವ್ಯವಹಾರಿಕ ಜ್ಞಾನ ಹೆಚ್ಚುತ್ತದೆ ಹಲಗೂರು ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಶಂಕರೇಗೌಡ ತಿಳಿಸಿದರು.ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿಧಾನ 75ನೇ ವರ್ಷದ ಸಂಭ್ರಮಾಚರಣೆ ಹಾಗೂ ಜ.ನಾಗ ಮೋಹನ್ ದಾಸ್ ಬರೆದಿರುವ ಉಚಿತ ಸಂವಿಧಾನ ಓದು ಪುಸ್ತಕ ವಿತರಣೆ, ನಮ್ಮ ಸಂವಿಧಾನ ಮತ್ತು ನಮ್ಮ ಜೀವನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಸಂವಿಧಾನ ಇಡೀ ಜಗತ್ತಿನಲ್ಲಿ ಅತಿ ಶ್ರೇಷ್ಠವಾಗಿದೆ. ಎಲ್ಲ ವರ್ಗದ ಜನರಿಗೆ ಈ ಸಂವಿಧಾನ ವರವಿದ್ದಂತೆಯ ನಾನು ಒಬ್ಬ ರೈತನ ಮಗ ಪ್ರಾಧ್ಯಾಪಕನಾಗಲು ಈ ಸಂವಿಧಾನ ನೀಡಿದ ವರವೆಂದರೆ ತಪ್ಪಾಗಲಾರದು ಎಂದರು.ಕರ್ನಾಟಕ ಸಿವಿಲ್ ಕೋರ್ಟ್ ನ್ಯಾಯಾಧೀಶೆಯಾಗಿ ಮದ್ದೂರು ತಾಲೂಕು ಅಣ್ಣೂರು ಗ್ರಾಮದ ಎಸ್.ರಂಜಿತಾ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ದಲಿತ ಸಮುದಾಯದ ಹೆಣ್ಣು ಮಗಳು ನ್ಯಾಯಾಧೀಶೆಯಾಗಿ ಆಯ್ಕೆಯಾಗಲು ನಮ್ಮ ಸಂವಿಧಾನ ಕಾರಣವಾಗಿದೆ ಎಂದರು.
ನಮ್ಮ ಸಂವಿಧಾನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯವನ್ನು ನೀಡಿದೆ. ಈ ಸಂವಿಧಾನದ ಕರ್ತೃ ಡಾ.ಬಿ.ಆರ್. ಅಂಬೇಡ್ಕರನ್ನು ವಿಶ್ವ ಜೀವಿ, ಮಾನವತಾವಾದಿ ಎಂದು ವಿಶ್ವ ಸಂಸ್ಥೆಯೇ ಒಪ್ಪಿಕೊಂಡಿದೆ. ಜ.ನಾಗಮೋಹನ್ ದಾಸ ಬರೆದಿರುವ ಸಂವಿಧಾನ ಓದು ಜನಸಮಾನ್ಯರಲ್ಲಿ ಸಂವಿಧಾನ ಏನೂ ಎಂಬುದರ ಬಗ್ಗೆ ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಮಾತನಾಡಿ, ಸಂವಿಧಾನವೆಂದರೆ ನಮ್ಮ ಜೀವನವನ್ನು ಕ್ರಮಬದ್ಧವಾಗಿ ನಡೆಸುವ ವಿಧಾನ ಎಂಬ ಅರ್ಥ. ಹಕ್ಕು, ಗೌರವಗಳನ್ನು ಈ ಸಂವಿಧಾನ ನೀಡಿದೆ. ಶಿಕ್ಷಣವನ್ನು ನಿಮ್ಮ ಮನೆ ಬಾಗಿಲಿಗೆ ತಂದವರು ಅಂಬೇಡ್ಕರ್. ಸಂವಿಧಾನ ಇಲ್ಲದಿದ್ದರೆ ಎಲ್ಲರೂ ಬದುಕುವುದು ಕಷ್ಟವಾಗುತ್ತಿತ್ತು ಎಂದರು.
ಈ ವೇಳೆ ಸಮಾಜ ಸೇವಕ ಬೆಂಗಳೂರಿನ ಉದ್ಯಮಿ ಪ್ರದೀಪ್ ನೀಡಿದ್ದ ಸಂವಿಧಾನ ಓದು ಪುಸ್ತಕವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಸುಧಾ ಬಿದಿರಿ, ಪ್ರೊ ಜಗದೀಶ, ಪ್ರೊ.ಶಿವರಾಮ, ಪ್ರೊ.ರವಿ, ಪ್ರೊ.ಗಿರೀಶ, ಆಫೀಸ್ ಸೂಪರಿಂಟೆಂಡೆಂಟ್ ಕುಮಾರ ಸ್ವಾಮಿ ಹಾಗೂ ಇತರರು ಇದ್ದರು.