ಆರ್‌ಸಿಬಿ ಪರ ಬೆಟ್ಟಿಂಗ್:ಗೆದ್ದೇ ಗೆಲ್ಲುವುದೆಂಬ ಕ್ರೇಜ್‌ನಲ್ಲಿ ಲಕ್ಷಾಂತರ ರು. ಪಣಕ್ಕೆ

KannadaprabhaNewsNetwork |  
Published : Jun 05, 2025, 01:31 AM IST

ಸಾರಾಂಶ

ಗುಪ್ತಗಾಮಿನಿಯಂತಿದ್ದ ಆರ್‌ಸಿಬಿ ಅಭಿಮಾನಿಗಳು ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಸಂಭ್ರಮಾಚರಣೆಗೆ ಬೀದಿಗಿಳಿಯುತ್ತಾರೆ ಎಂದು ಪೊಲೀಸರೇ ನಿರೀಕ್ಷಿಸಿರಲಿಲ್ಲ. ಅಭಿಮಾನಿಗಳ ಸಮೂಹವನ್ನು ಕಂಡು ಅವರೇ ಒಮ್ಮೆ ದಂಗಾದರು. ಎಲ್ಲೆಡೆ ಮಧ್ಯರಾತ್ರಿ ರಸ್ತೆಗಿಳಿದಿದ್ದರಿಂದ ಅವರನ್ನು ನಿಯಂತ್ರಿಸುವುದಕ್ಕೆ ಹರಸಾಹಸ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹದಿನೆಂಟು ವರ್ಷಗಳಿಂದ ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಗೆಲುವು ಸಾಧಿಸಲಾಗದೆ ಮುಗ್ಗರಿಸಿದ್ದ ಆರ್‌ಸಿಬಿ ಪರ ಅಭಿಮಾನಿಗಳ ಗೆಲುವಿನ ಮಹಾತ್ವಕಾಂಕ್ಷೆ ಹೆಚ್ಚಾಗಿತ್ತು. ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಗೆದ್ದೇ ಗೆಲ್ಲುತ್ತದೆ ಎಂಬ ಅತೀವ ಆತ್ಮವಿಶ್ವಾಸದೊಂದಿಗೆ ಬೆಟ್ಟಿಂಗ್ ಅಬ್ಬರವೂ ಜೋರಾಗಿತ್ತು. ಅಭಿಮಾನಿಗಳ ನಿರೀಕ್ಷೆಯನ್ನು ಆರ್‌ಸಿಬಿ ತಂಡ ಹುಸಿಗೊಳಿಸಲಿಲ್ಲ. ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ವಿಜಯದ ಮುಕುಟವನ್ನು ಮುಡಿಗೇರಿಸಿಕೊಂಡಿತು. ಇತ್ತ ಆರ್‌ಸಿಬಿ ಪರ ಬೆಟ್ಟಿಂಗ್ ಕಟ್ಟಿದವರು ಲಕ್ಷ ಲಕ್ಷ ಹಣದೊಂದಿಗೆ ಭರ್ಜರಿ ಲಾಭ ಗಳಿಸಿದರು.

ಈ ಬಾರಿ ಆರಂಭದಿಂದಲೂ ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಹುರಿದುಂಬಿಸುತ್ತಲೇ ಬಂದಿದ್ದರು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆರ್‌ಸಿಬಿ ಆಟಗಾರರು ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಪಂದ್ಯದಿಂದ ಪಂದ್ಯಕ್ಕೆ ಅಭಿಮಾನಿಗಳ ಗೆಲುವಿನ ವಿಶ್ವಾಸವೂ ಹೆಚ್ಚಾಗುತ್ತಲೇ ಇತ್ತು. ಕ್ವಾಲಿಫೈ -೧ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಮಣಿಸಿತ್ತು, ಹಾಗಾಗಿ ಸುಲಭವಾಗಿ ಫೈನಲ್ ಹಂತವನ್ನು ತಲುಪಿತ್ತು.

ಮತ್ತೆ ಪಂಜಾಬ್ ಕಿಂಗ್ಸ್ ತಂಡವೇ ಫೈನಲ್‌ಗೆ ಎದುರಾದಾಗ ಅಭಿಮಾನಿಗಳು ಆರ್‌ಸಿಬಿಗೆ ಗೆಲುವು ಸುಲಭ ತುತ್ತೆಂದು ಭಾವಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಿದರು. ಯುವಕರಂತೂ ವಾಹನಗಳು, ಚಿನ್ನದ ಚೈನು, ಸಾವಿರಕ್ಕೆ ಹತ್ತು ಸಾವಿರ, ಹತ್ತು ಸಾವಿರಕ್ಕೆ ಒಂದು ಲಕ್ಷ, ಒಂದು ಲಕ್ಷಕ್ಕೆ ಹತ್ತು ಲಕ್ಷ ಹೀಗೆ ಬೆಟ್ಟಿಂಗ್ ಭರಾಟೆ ಜೋರಾಗಿಯೇ ನಡೆದಿತ್ತು. ಆರ್‌ಸಿಬಿ ಪರ ಎಷ್ಟು ಬೇಕಾದರೂ ಹಣವನ್ನು ಬಾಜಿ ಕಟ್ಟುವುದಕ್ಕೆ ರೆಡಿಯಾಗಿದ್ದರು.

ಕೆಲವರು ಆರ್‌ಸಿಬಿ ಮೂರು ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದ್ದರಿಂದ ಈ ಬಾರಿಯೂ ಗೆಲ್ಲುವುದಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ಸೆಮಿಫೈನಲ್‌ನಲ್ಲಿ ಅದ್ಭುತ ಗೆಲುವು ದಾಖಲಿಸಿದ್ದ ಪಂಜಾಬ್ ಕಿಂಗ್ಸ್ ಕಪ್ ಗೆಲ್ಲಬಹುದೆಂಬ ವಿಶ್ವಾಸದಲ್ಲಿ ಆರ್‌ಸಿಬಿ ವಿರುದ್ಧ ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಿದ್ದರು.

ಆದರೆ, ಆರ್‌ಸಿಬಿ ಪರ ಇದ್ದವರ ನಿರೀಕ್ಷೆ ಹುಸಿಯಾಗಲಿಲ್ಲ. ಅವರ ಹಣಕ್ಕೆ ಮೋಸವಾಗಲಿಲ್ಲ. ಫೈನಲ್‌ನಲ್ಲಿ ಭರ್ಜರಿ ಜಯವನ್ನು ದಾಖಲಿಸಿದ್ದರಿಂದ ಲಕ್ಷಗಟ್ಟಲೆ ಹಣವನ್ನು ಬೆಟ್ಟಿಂಗ್ ಕಟ್ಟಿದ್ದವರು ಖುಷಿಯಾದರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಸಂಭ್ರಮವನ್ನು ಹಂಚಿಕೊಂಡರು. ಆರ್‌ಸಿಬಿ ತಂಡ, ವಿರಾಟ್‌ ಕೊಹ್ಲಿ ಭಾವಚಿತ್ರಗಳಿಗೆ ಮುತ್ತು ಕೊಟ್ಟು, ಹಾರ ಹಾಕಿ ಸಂಭ್ರಮಿಸಿದರು. ರಾತ್ರಿಯಿಂದ ಬೆಳಗ್ಗೆಯವರೆಗೂ ಸಂತಸದ ಹೊನಲಿನಲ್ಲಿ ನಲಿದಾಡಿದರು.

ಗುಪ್ತಗಾಮಿನಿಯಂತಿದ್ದ ಆರ್‌ಸಿಬಿ ಅಭಿಮಾನಿಗಳು ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಸಂಭ್ರಮಾಚರಣೆಗೆ ಬೀದಿಗಿಳಿಯುತ್ತಾರೆ ಎಂದು ಪೊಲೀಸರೇ ನಿರೀಕ್ಷಿಸಿರಲಿಲ್ಲ. ಅಭಿಮಾನಿಗಳ ಸಮೂಹವನ್ನು ಕಂಡು ಅವರೇ ಒಮ್ಮೆ ದಂಗಾದರು. ಎಲ್ಲೆಡೆ ಮಧ್ಯರಾತ್ರಿ ರಸ್ತೆಗಿಳಿದಿದ್ದರಿಂದ ಅವರನ್ನು ನಿಯಂತ್ರಿಸುವುದಕ್ಕೆ ಹರಸಾಹಸ ನಡೆಸಿದರು.

ಆರ್‌ಸಿಬಿ ಗೆಲುವಿನ ಖುಷಿಯೊಂದಿಗೆ ಅಭಿಮಾನಿಗಳಿಗೆ ಬೆಟ್ಟಿಂಗ್‌ನಲ್ಲಿ ಗೆದ್ದ ಖುಷಿ ನೂರ್ಮಡಿಗೊಳಿಸಿತ್ತು. ಆರ್‌ಸಿಬಿ ಗೆಲುವನ್ನು ಸಂಭ್ರಮಿಸುತ್ತಾ ಬೆಟ್ಟಿಂಗ್‌ನಿಂದ ಗಳಿಸಿದ ಹಣವನ್ನು ಲೆಕ್ಕ ಹಾಕುತ್ತಾ ಮುಂದಿನ ಐಪಿಎಲ್‌ನ್ನು ಎದುರುನೋಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌