ಬಾಲ ಬಿಚ್ಚಿದರೆ ಕಟ್‌ ಮಾಡಬೇಕಾಗುತ್ತೆ ಹುಷಾರು : ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ

KannadaprabhaNewsNetwork |  
Published : May 09, 2025, 12:35 AM ISTUpdated : May 09, 2025, 12:11 PM IST
ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ | Kannada Prabha

ಸಾರಾಂಶ

ಸ್ಟೈಲ್‌ಗಾಗಿ ಕೂದಲು ಬಿಟ್ಟವರು, ಟ್ಯಾಟು ಹಾಕಿಸಿಕೊಂಡವರು, ಅಪರಾಧ ಚಟುವಟಿಕೆಯಲ್ಲಿ ಈಗಲೂ ತೊಡಗಿಕೊಂಡವರಿಗೆ ತರಾಟೆ ತೆಗೆದುಕೊಂಡ ಆಯುಕ್ತರು 

ಹುಬ್ಬಳ್ಳಿ:ಬಾಲಬಿಚ್ಚಿದರೆ ಪರಿಣಾಮ ನೆಟ್ಟಗಿರದು. ಬಾಲವನ್ನೇ ಕಟ್‌ ಮಾಡಬೇಕಾಗುತ್ತೆ!

ಇದು ರೌಡಿಶೀಟರ್‌ಗಳಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ನೀಡಿರುವ ಎಚ್ಚರಿಕೆ. ಇಲ್ಲಿನ ಕಾರವಾರ ರಸ್ತೆಯ ಹಳೇ ಸಿಎಆರ್ ಮೈದಾನದಲ್ಲಿ ಗುರುವಾರ ವಿವಿಧ ಠಾಣಾ ವ್ಯಾಪ್ತಿಯ ೯೮೦ ರೌಡಿಶೀಟರ್‌ಗಳ ಪರೇಡ್ ನಡೆಸಿದರು. ಈ ವೇಳೆ ಈ ಖಡಕ್‌ ವಾರ್ನಿಂಗ್‌ ನೀಡಿದರು.

ಸ್ಟೈಲ್‌ಗಾಗಿ ಕೂದಲು ಬಿಟ್ಟವರು, ಟ್ಯಾಟು ಹಾಕಿಸಿಕೊಂಡವರು, ಅಪರಾಧ ಚಟುವಟಿಕೆಯಲ್ಲಿ ಈಗಲೂ ತೊಡಗಿಕೊಂಡವರಿಗೆ ತರಾಟೆ ತೆಗೆದುಕೊಂಡ ಆಯುಕ್ತರು, ತೆಪ್ಪಗೆ ಇದ್ದರೆ ಸರಿ. ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ರೌಡಿಶೀಟರ್‌ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆಯಂತಹ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗ ಆಗದಂತೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪರೇಡ್ ನಡೆಸಲಾಗುತ್ತಿದೆ ಎಂದರು.

ಅವಳಿನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 1,700ಕ್ಕೂ ರೌಡಿಶೀಟರ್‌ಗಳು ಇದ್ದಾರೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ 60ರಿಂದ 200 ಜನರ ವರೆಗೂ ರೌಡಿಶೀಟರ್ ಇದ್ದಾರೆ. ಇವರೆಲ್ಲರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಈಗಾಗಲೇ 50 ಜನರನ್ನು ಗಡೀಪಾರು ಮಾಡಲಾಗಿದೆ. ದೂರದ ಬೀದರ, ಕಲಬುರಗಿ, ಚಾಮರಾಜನಗರ ಸೇರಿ ಹಲವಡೆ ಗಡೀಪಾರು ಮಾಡಿ ಅಂಥವರ ಮೇಲೂ ನಿಗಾ ಇಡಲಾಗಿದೆ ಎಂದರು.

ಮಹಾನಗರದಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರು ಸೇರಿ ಪದೇ ಪದೇ ಅಪರಾಧ ಚಟುವಟಿಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ರಾತ್ರಿ 11ರಿಂದ ಕಾರ್ಯಾಚರಣೆ ಮಾಡಿ 980 ರೌಡಿಶೀಟರ್ ಕರೆಸಲಾಗಿದೆ. 250 ಜನರು ಬೇರೆ ಬೇರೆ ಕಾರಣಗಳಿಂದ ಲಭ್ಯವಿಲ್ಲ. 100 ಜನ ಅನಾರೋಗ್ಯದಲ್ಲಿದ್ದಾರೆ. ಇನ್ನೂ ಕೆಲವರು ಪರೇಡ್ ಸುದ್ದಿ ತಿಳಿದು ನಾಪತ್ತೆಯಾಗಿದ್ದಾರೆ. ಎಲ್ಲವನ್ನೂ ಪರಿಶೀಲನೆ ನಡೆಸಲಾಗುವುದು ಎಂದರು.

2025ರಲ್ಲಿ ಹೊಸದಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರನ್ನು ಸಹ ಗಡೀಪಾರು ಮಾಡಲಾಗುತ್ತಿದೆ. ಕೆಲವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ ಎಂದರು.

ನಿಗಾ ಇರಲಿ: ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ, ಮನರಂಜನೆಗಳ ವಿಡಿಯೋ ಸಾಮಾನ್ಯ. ಆದರೆ, ರೌಡಿಶೀಟರ್‌ಗಳು ಸಹ ಖಾತೆ ತೆರೆದು ಬಿಲ್ಡ್‌ಅಪ್‌ ಕೊಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಹೀಗಾಗಿ ಆಯುಧಗಳನ್ನು ಹಿಡಿದು ರೀಲ್ಸ್ ಮಾಡುವುದು, ಡೈಲಾಗ್ ಹೊಡೆಯುವುದು, ಬಿಲ್ಡಪ್ ಕೊಡುವವರ ಮೇಲೆ ನಿಗಾ ಇಡಬೇಕು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಮಾಡುತ್ತಿರುವ 13 ಜನರನ್ನು ಗುರುತಿಸಲಾಗಿದೆ. ಉಳಿದವರ ಮೇಲೂ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.

ಲಾಕೇಟ್‌ ಬಿಚ್ಚಿಸಿದ ಆಯುಕ್ತರು!

ಕೊಲೆ ಆರೋಪದಲ್ಲಿರುವ ರೌಡಿಶೀಟರ್ ಓರ್ವನಿಗೆ ಚಳಿ ಬಿಡಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಮಾಡಿರುವುದು ಕೊಲೆ, ಆಂಜನೇಯಸ್ವಾಮಿ ಲಾಕೆಟ್ ಹಾಕ್ಕೊಂಡಿದ್ದೀಯಾ? ದೇವರು ಲಾಕೆಟ್ ಹಾಕಿಕೊಳ್ಳುವುದಕ್ಕೆ ಯೋಗ್ಯತೆ ನಿನಗಿಲ್ಲ ಎಂದು ಲಾಕೆಟ್ ಬಿಚ್ಚಿಸಿದರು.

ರೌಡಿಶೀಟರ್ ಇದ್ದ ಆಟೋ ಚಾಲಕನಿಗೆ ಜನ ಆಟೋ ಹತ್ತುವುದಕ್ಕೂ ಯೋಚನೆ ಮಾಡುತ್ತಾರೆ ಎಂದರು.

ರೌಡಿಶೀಟರ್ ದಾವುದ್‌ಗೆ ಖಡಕ್ ವಾರ್ನಿಂಗ್ ನೀಡಿ, ಸೋಶಿಯಲ್ ಮೀಡಿಯಾದಲ್ಲಿ ಶೋ ಕೊಡ್ತೀಯಾ, ಪ್ರತಿಭಟನೆಗೆ ಬಂದಿದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೀಯಾ? ನೀನೇನು ದೊಡ್ಡ ಲೀಡರ್ ಏನು? ರೌಡಿಶೀಟರ್ ಇದೆ ನಿನ್ನ ಮೇಲೆ ನೆನಪಿರಲಿ, ನೀಟಾಗಿ ಕಟಿಂಗ್ ಮಾಡಿಸಿಕೊಳ್ಳಬೇಕು, ಸರಿಯಾಗಿರಬೇಕು ಎಂದು ವಾರ್ನಿಂಗ್ ಕೊಟ್ಟರು.

ಇದರ ಜತೆಯಲ್ಲಿ ಗಡ್ಡ, ತಲೆ ಕೂದಲು, ಟ್ಯಾಟು ಹಾಕಿಕೊಂಡವರನ್ನು ಗುರುತಿಸಿ ಪ್ರತ್ಯೇಕವಾಗಿ ನಿಲ್ಲಿಸಿ ಕಟಿಂಗ್ ಮಾಡಿಸುವಂತೆ, ಟ್ಯಾಟು ತೆಗೆಸುವಂತೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!