ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವೂ ಅವೈಜ್ಞಾನಿಕ

KannadaprabhaNewsNetwork |  
Published : May 09, 2025, 12:35 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ಹೊರವಲಯ ಕುಂಚಿಗನಹಾಳು ಕಣಿವೆ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಡಳಿತ ಭವನದ ಕಾಮಗಾರಿಯ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಇದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅವೈಜ್ಞಾನಿಕ ಡಿವೈಡರ್, ಅವೈಜ್ಞಾನಿಕ ಸಿಸಿ ರಸ್ತೆ ನಿರ್ಮಾಣದಿಂದಾಗಿ ದೇಶವ್ಯಾಪಿ ಸುದ್ದಿಗೆ ಗ್ರಾಸವಾಗಿದ್ದ ಚಿತ್ರದುರ್ಗ ನಗರ ಇದೀಗ ಮತ್ತೊಂದು ಅವೈಜ್ಞಾನಿಕ ವ್ಯವಸ್ಥೆಗೆ ತೆರೆದುಕೊಂಡಿದೆ.

ಬೆಂಗಳೂರು ರಸ್ತೆಯ ಕುಂಚಿಗನಹಾಳು ಕಣಿವೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಡಳಿತ ಭವನ( ಡಿಸಿ ಕಚೇರಿ) ಕೂಡಾ ಅವೈಜ್ಞಾನಿಕತೆ ಆಗರವಾಗಿದ್ದು ಭಾರತೀಯ ಎಂಜಿನಿಯರಿಂಗ್ ವ್ಯವಸ್ಥೆಗೆ ಅವಮಾನಕರವಾಗಿದೆ. ಡಿಸಿ ಕಚೇರಿ ಎಂದರೆ ಕೊಠಡಿಗಳು ಎಂದಷ್ಟೇ ಭಾವಿಸಿ ಕಾಂಕ್ರಿಟ್ ಕಟ್ಟಡ ನಿರ್ಮಿಸಲಾಗಿದೆ. ಮೂಲ ಸೌಕರ್ಯಗಳತ್ತ ಅಷ್ಟಾಗಿ ಗಮನ ಹರಿಸಲಾಗಿಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಕನಿಷ್ಟವೆಂದರ 15 ಕೋಟಿಗಳಷ್ಟು ಅನುದಾನದ ಅಗತ್ಯವಿದೆ.

ಬಾಗಲಕೋಟೆ, ಕೊಪ್ಪಳ ಸೇರಿದಂತೆ ಹೊಸ ಜಿಲ್ಲೆಗಳಲ್ಲಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಭವನ ನೋಡಿಯಾದರೂ ನೀಲನಕ್ಷೆ ತಯಾರಿಸಿ ಆ ನಿಟ್ಟಿನಲ್ಲಿ ಮುಂದುವರಿಯಬಹುದಿತ್ತು. ಕಟ್ಟಡದಲ್ಲಿ ಕ್ಯಾಂಟೀನ್ ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿಲ್ಲ.ಕುಡಿವ ನೀರಿನ ವ್ಯವಸ್ಥೆ ಕಡೆ ಗಮನ ಹರಿಸಲಾಗಿಲ್ಲ. ಅಪ್ರೋಚ್ ರಸ್ತೆ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಜಿಲ್ಲಾಡಳಿತ ಭವನ ಕಟ್ಟಡ ನಿರ್ಮಾಣ ಸಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಗುರುವಾರ ಜಿಲ್ಲಾಡಳಿತ ಭವನ ನಿರ್ಮಾಣದ ಕಾಮಗಾರಿ ಪರಿಶೀಲಿಸಿದರು. ನಂತರ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ನೂತನ ಜಿಲ್ಲಾಡಳಿತ ಭವನದ ಕಟ್ಟಡ ನಿರ್ಮಾಣ ಕಾರ್ಯವನ್ನು ಇನ್ನೂ ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಾಗುವುದು ಎಂದರು.

25 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದ ಈ ಕಟ್ಟಡಕ್ಕೆ ಈಗಾಗಲೇ 46 ಕೋಟಿ ರು. ವೆಚ್ಚವಾಗಿದೆ. ಪ್ರಸ್ತುತ ರೂಪಿಸಿರುವ ಯೋಜನೆಯಲ್ಲಿ ಕುಡಿಯುವ ನೀರು, ಕ್ಯಾಂಟೀನ್, ಸಂಪರ್ಕ ರಸ್ತೆ, ಪಾರ್ಕಿಂಗ್, ಅಗ್ನಿನಿಯಂತ್ರಕ ವ್ಯವಸ್ಥೆ, ಕೊರೆದಿರುವ ಗುಡ್ಡಕ್ಕೆ ರಕ್ಷಣಾ ವ್ಯವಸ್ಥೆ, ಪೀಠೋಪಕರಣಗಳು, ಇನ್ನೂ ಹಲವು ಕಾಮಗಾರಿಗಳಿಗೆ ಯೋಜನಾ ವೆಚ್ಚ ಸಿದ್ಧಪಡಿಸಿರುವುದಿಲ್ಲ. ಈ ಎಲ್ಲ ಕಾಮಗಾರಿಗಳಿಗೆ ಸುಮಾರು ರು.15 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಭವನದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಹೆಚ್ಚುವರಿ ಅನುದಾನ ಬಿಡುಗಡೆ ಮನವಿ ಮಾಡಲಾಗುವುದು.ನೂತನ ಜಿಲ್ಲಾಡಳಿತ ಭವನದ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಹಲವು ಇಲಾಖೆಗಳು ಕಾರ್ಯನಿರ್ವಹಿಸಲಿದ್ದು, ಚಿತ್ರದುರ್ಗ ಉಪವಿಭಾಗ ಕಚೇರಿ ನಗರದೊಳಗೆ ಕಾರ್ಯನಿರ್ವಹಿಸಲಿದೆ ಎಂದರು.

ಚಳ್ಳಕೆರೆ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ, ಗುತ್ತಿಗೆದಾರ ಪಾಲಾಕ್ಷಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ