ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಆದಿಗುರು ಶ್ರೀ ಶಂಕರಚಾರ್ಯ’ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಶಂಕರಾಚಾರ್ಯರ ಕುರಿತು ಪಠ್ಯಪುಸ್ತಕದಲ್ಲಿ ಓದಿದ ನೆನಪುಗಳು ಇಂದಿಗೂ ಸ್ಮರಣೀಯವಾಗಿವೆ. ಆಡಂಬರ, ಮೂಢನಂಬಿಕೆ, ಸಾಮಾಜಿಕ ಅಸಮಾನತೆಯಿಂದ ಕೂಡಿದ್ದ ಅಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ಆಧ್ಯಾತ್ಮದ ದಾರಿ ತೋರಿ ಉನ್ನತೀಯಡೆಗೆ ನಡೆಸಿದರು. ಮಾನವ ಕುಲದ ಒಳಿತಿಗಾಗಿ ದುಡಿದ ಆದರ್ಶ ವ್ಯಕ್ತಿತ್ವ ಶಂಕರಾಚಾರ್ಯ ಅವರದ್ದಾಗಿದೆ ಎಂದರು.ಶಂಕರಾಚಾರ್ಯರು ಬದುಕಿದ್ದ 32 ವರ್ಷಗಳಲ್ಲಿ ಭಾರತ ದೇಶವನ್ನು 3 ಬಾರಿ ಪ್ರದಕ್ಷಿಣೆ ಹಾಕಿ ಧರ್ಮ ಪ್ರಸಾರ ಮಾಡಿ ಸಮಾಜೋದ್ಧಾರಕ್ಕಾಗಿ ತಮ್ಮ ಇಡೀ ಜೀವನವನ್ನೆ ಮುಡಿಪಾಗಿಟ್ಟರು. ಶಂಕರಾಚಾರ್ಯರ ಮೌಲ್ಯಯುತ ಆದರ್ಶ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಸಲುವಾಗಿ ಜಿಲ್ಲೆಯ ಶಿನವಸಮುದ್ರದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಎಸ್.ಸುರೇಶ್ ಮಾತನಾಡಿ, ಹಿಂದು ಧರ್ಮದ ಪುನರುಜ್ಜೀವನಕ್ಕೆ ನಾಂದಿ ಹಾಡಿದವರಲ್ಲಿ ಶ್ರೀ ಶಂಕರಾಚಾರ್ಯರು ಅಗ್ರಗಣ್ಯರಾಗಿದ್ದಾರೆ. ಅವರ ಚಿಂತನೆಗಳ ಆದರ್ಶವನ್ನು ಪಾಲಿಸೋಣ. ಅಖಂಡ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರ ಹಾದಿಯಲ್ಲಿ ನಾವೆಲ್ಲರೂ ಮುನ್ನೆಡೆಯೋಣ ಎಂದರು.
ಕವಿಗಳು, ಸಂಶೋಧಕರು ಆಗಿದ್ದ ಶಂಕರಾಚಾರ್ಯರು 200ಕ್ಕೂ ಹೆಚ್ಚು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಮಾತೃಭಕ್ತಿ ಇಡೀ ಮಾನವಕುಲಕ್ಕೆ ಮಾದರಿಯಾಗಿದೆ. ಅಪಾರ ಜ್ಞಾನಸಂಪತ್ತು ಹೊಂದಿದ್ದ ಶಂಕರರು ಬಡತನ ನಿರ್ಮೂಲನೆಗೆ ಒತ್ತು ನೀಡಿದರು. ತಮ್ಮೊಳಗಿನ ವ್ಯಕ್ತಿತ್ವದಿಂದ ಶಂಕರರು ಎಲ್ಲರನ್ನೂ ತಮ್ಮೆಡೆಗೆ ಸೆಳೆದರು. ಜಗತ್ತಿನಲ್ಲಿ ಉಳಿದಿರುವ ಕೆಲವೇ ನಾಗರಿಕತೆಗಳಲ್ಲಿ ಒಂದಾಗಿರುವ ಭಾರತೀಯ ನಾಗರಿಕತೆಗೆ ಶಂಕರರು ಭದ್ರಬುನಾದಿ ಹಾಕಿದ್ದರು. ಜ್ಞಾನಕ್ಕೆ ಯಾವುದೇ ಜಾತಿ ಇಲ್ಲ. ಜ್ಞಾನವೇ ಸರ್ವಶ್ರೇಷ್ಠವಾದದ್ದು ಎಂದು ಸಾರಿದ ಶಂಕರಾಚಾರ್ಯರ ಜನ್ಮದಿನವನ್ನು ಸರ್ಕಾರ ವಿಶ್ವ ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದೆ ಎಂದು ತಿಳಿಸಿದರು.