ಬಳ್ಳಾರಿ: ಜಾತಿ, ಧರ್ಮಗಳ ಹೆಸರಿನಲ್ಲಿ ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಅಂತಹವರಿಂದ ಸದಾ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಯಾವುದೇ ಧರ್ಮವಾಗಲಿ ಸಮಾಜದ ಒಳಿತನ್ನು ಬಯಸುತ್ತದೆಯೇ ವಿನಃ ಸಮಾಜ ಒಡೆಯಲು ಬೋಧಿಸುವುದಿಲ್ಲ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ ಎಲ್ಲರೂ ಸಹಿಷ್ಣುತೆಯಿಂದ ಜೀವನ ನಡೆಸಬೇಕು. ಆದರೆ, ಕೆಲವು ಶಕ್ತಿಗಳು ಸಂವಿಧಾನ ವಿರೋಧಿಯಾಗಿವೆ. ಬಸವಾದಿ ಶರಣರ ಸಮ ಸಮಾಜದ ನಿರ್ಮಾಣದ ಆಶಯ ಇಲ್ಲದವರು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿರುತ್ತಾರೆ. ಎಲ್ಲ ಸಮುದಾಯಗಳು ಒಗ್ಗಟ್ಟು ಹಾಗೂ ಸಹಬಾಳ್ವೆಯಿಂದ ಜೀವನ ನಡೆಸುವಂತಾದರೆ ಯಾವುದೇ ಜಾತಿ ಶಕ್ತಿಗಳು ಏನು ಮಾಡಲು ಸಾಧ್ಯವಾಗದು ಎಂದು ತಿಳಿಸಿದರು.
ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ:ಕ್ರೈಸ್ತ ಮಿಷನರಿಗಳು ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಅಪಾರವಾದ ಕೊಡುಗೆ ನೀಡಿವೆ. ಈ ಹಿಂದೆ ಬಡ ಸಮುದಾಯಗಳಿಗೆ ಶಿಕ್ಷಣ ಕೈಗೆಟಕುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಕ್ರೈಸ್ತ ಮಿಷನರಿಗಳು ಎಲ್ಲ ಕಡೆ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡಿದವು. ಇಂದಿಗೂ ಶೈಕ್ಷಣಿಕ ಹಾಗೂ ಆರೋಗ್ಯ ವಲಯದಲ್ಲಿ ಕ್ರೈಸ್ತ ಧರ್ಮದ ಕೊಡುಗೆ ದೊಡ್ಡದಿದೆ ಎಂದರು.
ನಾನು ಹಿಂದೂ ವಿರೋಧಿಯಂತೆ ಬಿಂಬಿಸಲಾಗುತ್ತಿದೆ. ಆದರೆ, ನಾನು ಯಾವುದೇ ಧರ್ಮದ ವಿರೋಧಿಯಲ್ಲ. ನಾನು ಹಿಂದೂ ಧರ್ಮವನ್ನು ಪ್ರೀತಿಸಿದಂತೆಯೇ ಉಳಿದ ಧರ್ಮಗಳನ್ನೂ ಪ್ರೀತಿಸುತ್ತೇನೆ; ಗೌರವಿಸುತ್ತೇನೆ. ಜಾತಿ ವ್ಯವಸ್ಥೆಯಿಂದಾಗಿಯೇ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತಳ ಸಮುದಾಯಗಳು ಪ್ರಗತಿ ಕಂಡುಕೊಂಡರೆ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬಹುದು. ಇದಕ್ಕಾಗಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಲ್ಯಾಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ಇದನ್ನು ಸಹಿಸದ ಕೆಲವರು ಗ್ಯಾರಂಟಿ ಯೋಜನೆಗಳ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಯಾರು ಏನೇ ಹೇಳಲಿ, ನಾನು ಮಾತ್ರ ಬಡವರ ಪರವಾಗಿ ನಿಲ್ಲುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ನಾನು ನೇರವಾಗಿ ಐದನೇ ತರಗತಿಗೆ ಸೇರಿದೆ:
ನಮ್ಮಪ್ಪ ವೀರಮಕ್ಕಳ ಕುಣಿತಕ್ಕೆ ಸೇರಿಸಿದ್ದರು. ಎರಡು ವರ್ಷದ ಕುಣಿತ ಕಲಿತೆ. ಇದರಿಂದ ಶಿಕ್ಷಣ ಮೊಟಕಾಯಿತು. ಬಳಿಕ ನಮ್ಮೂರ ಶಾಲೆಯ ಹೆಡ್‌ಮಾಸ್ಟರ್ ರಾಜಪ್ಪ ನಮ್ಮಪ್ಪನ ಬಳಿ ಬಂದು ನನ್ನನ್ನು ಶಾಲೆಗೆ ಸೇರಿಸುವಂತೆ ಮನವೊಲಿಸಿದರು. ಅಲ್ಲದೆ, ನಾನು ಓದಿನಲ್ಲಿ ಮುಂದಿದ್ದೆ ಎಂಬ ಕಾರಣಕ್ಕಾಗಿಯೇ ನೇರವಾಗಿ ಐದನ ತರಗತಿಗೆ ಸೇರಿಸಿದರು ಎಂದು ಸಿಎಂ ಸಿದ್ದರಾಮಯ್ಯ ಬಾಲ್ಯವನ್ನು ಸ್ಮರಿಸಿಕೊಂಡರು.