ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸೋಮವಾರ ರಾತ್ರಿ ತಾಲೂಕಿನ ಪಾಳೆ ಬಳಿಯ ಹಜರತ್ ಬಾದಶಾ ಪೀರ್ ದರ್ಗಾದ ಆವರಣದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮಾತನಾಡಿದರು.
ರಾಜಕಾರಣ ಮಾಡುವ ಉದ್ದೇಶದಿಂದ ಜಾತಿ, ಧರ್ಮದ ನಡುವ ಸಂಘರ್ಷ ತರುತ್ತಾರೆ. ಇದರಿಂದ ತಾತ್ಕಾಲಿಕ ಜಯ ಸಿಗಬಹುದು. ಆದರೆ, ಅದು ಶಾಶ್ವತವಲ್ಲ. ಬಸವಾದಿ ಶರಣರು, ಬುದ್ಧ ಹಾಗೂ ಮೊಹಮ್ಮದ್ ಪೈಗಂಬರ ಅವರು ಜಾತಿ, ವರ್ಗ ರಹಿತ ಸಮಾಜದ ಕನಸನ್ನು ಕಂಡವರು. ಅವರ ತತ್ವವನ್ನು ನಾವೆಲ್ಲ ಮುಂದುವರಿಸಬೇಕು ಎಂದರು.ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಎಲ್ಲ ಧರ್ಮದವರು ಸಹೋದರರಂತೆ ಜೀವನ ನಡೆಸುತ್ತಿದ್ದೇವೆ. ನಮ್ಮದು ವೈವಿಧ್ಯತೆಯಲ್ಲಿ ಏಕತೆ ಕಾಣುವ ನಾಡು. ಯಾರೇ ಆಗಲಿ ಹುಟ್ಟುವಾಗ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹುಟ್ಟಿದ ಮೇಲೆ ಅವರದೇ ಆದ ಧರ್ಮದ ಅಡಿ ಇನ್ನೊಬ್ಬರಿಗೆ ತೊಂದರೆ ನೀಡದೇ ಸಹೋದರತ್ವದಡಿ ಬಾಳಬೇಕು. ಅಂದಾಗ ಮಾತ್ರ ಮಾನವ ಜನ್ಮ ಸಾರ್ಥಕತೆ ಪಡೆದುಕೊಳ್ಳುವುದು ಎಂದರು.
ಮುಸ್ಲಿಂ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ. ನಿಮ್ಮ ರಕ್ಷಣೆಗೆ ನಮ್ಮ ಸರ್ಕಾರವಿದೆ. ನಮ್ಮ ಸರ್ಕಾರದಲ್ಲಿ ಮೇಲು-ಕೀಳು ಎಂಬ ಭೇದವಿಲ್ಲ. ನಾವು ಅಧಿಕಾರದಲ್ಲಿ ಇರುವ ವರೆಗೆ ಸಮಾಜದಲ್ಲಿ ಸೌಹಾರ್ದ ಉಂಟು ಮಾಡುವ ಕೆಲಸ ಮಾಡುತ್ತೇವೆ ಎಂದರು.
ಎಲ್ಲ ಧರ್ಮಗಳೂ ಮನುಷತ್ವವನ್ನೇ ಬೋಧಿಸುತ್ತವೆ. ನಮ್ಮ ಸಮಾಜದಲ್ಲಿ ವೈವಿಧ್ಯತೆ ಇದೆ. ಆದರೆ, ಏಕತೆ ಕಾಣುವ ಅವಶ್ಯಕತೆ ಇದೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪೀಸ್ ಫಾರ್ ನೇಷನ್ ಧ್ಯೇಯ ವಾಕ್ಯದೊಂದಿಗೆ ಈ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ ಮಕ್ಕಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಸದುದ್ದೇಶ ಹೊಂದಲಾಗಿದೆ. ಕೋಮುವಾದಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮದ ವಿಚಾರದಲ್ಲಿ ದೇಶ ಛಿದ್ರವಾಗುತ್ತಿದೆ. ಹೀಗಾಗಿ ದೇಶದಲ್ಲಿ ಶಾಂತಿ, ಸಮಾನತೆ, ಶೈಕ್ಷಣಿಕ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಾಸಕರಾದ ಶ್ರೀನಿವಾಸ ಮಾನೆ, ಎನ್.ಎಚ್. ಕೋನರಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಮಾಜಿ ಸಂಸದ ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಸ್ಯಯ್ಯದ ತಾಜುದ್ದೀನ್ ಪೀರ್ ಖಾದ್ರಿ, ಕಲಬುರ್ಗಿಯ ಖಾಜಾ ಬಂದೇ ನವಾಜ್ ದರ್ಗಾದ ಡಾ. ಸಯ್ಯದ ಖುಶ್ರುಹುಸೇನಿ ಸಾಹೇಬ ಖಿಬ್ಲಾ ಸೇರಿದಂತೆ 200ಕ್ಕೂ ಹೆಚ್ಚು ಧರ್ಮಗುರುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.