ಜನಪರ ಚಿಂತಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳುತ್ತಿದ್ದಾರೆ । ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸರ್ವ ಸದಸ್ಯರ ಮಹಾಸಭೆ
ದಲಿತ ಚಳುವಳಿಗಳ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ಎಚ್ಚರವಹಿಸಿ, ಆರೋಗ್ಯಕರ ರಚನಾತ್ಮಕ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಚಳುವಳಿಗಳನ್ನು ಸುಭದ್ರವಾಗಿ ಕಟ್ಟಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಚಳುವಳಿಗಳು ವೈಚಾರಿಕತೆ ಪ್ರಖರತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ದೂರಗಾಮಿ ನೀತಿಯನ್ನು ಅರಿಯಬೇಕಿದೆ. ಇದಿಲ್ಲದಿದ್ದರೇ ಚಳುವಳಿಗಳು ಹಿನ್ನಡೆ ಅನುಭವಿಸುತ್ತವೆ ಎಂದು ಕಿವಿ ಮಾತು ಹೇಳಿದರು.ಸಾಮಾಜಿಕ ಜಾಲತಾಣಗಳಲ್ಲಿ ದಲಿತ ಚಳುವಳಿಗಳನ್ನು ಕೆಲವರು ಟೀಕಿಸುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಆದರೆ, ದಲಿತ ಚಳುವಳಿ ಗಳು ನಡೆಸಿದ ಪ್ರಖರ ಚಳುವಳಿಗಳಿಂದ ಎಚ್ಚೆತ್ತುಕೊಂಡ ಸರ್ಕಾರಗಳು ದಲಿತರ ಪರವಾದ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಿವೆ. ಈ ಬಗ್ಗೆ ಸಂಘಟನೆ ಕಾರ್ಯಕರ್ತರು ಸಮುದಾಯದ ಜನರಿಗೆ ತಿಳಿಸಬೇಕೆಂದರು.
ಕೆಲವು ಕೋಮುವಾದಿ ಶಕ್ತಿಗಳು ಧಾರ್ಮಿಕ ಸಂಸತ್ತುಗಳಲ್ಲಿ ರಚನೆಗೊಂಡ ಅಲಿಖಿತ ಸಂವಿಧಾನಗಳ ಮೂಲಕ ಜನರ ನಡುವೆ ಧಾರ್ಮಿಕ ಭಯೋತ್ಪಾದನೆ ಬಿತ್ತುವ ಮೂಲಕ ಲಿಖಿತ ಸಂವಿಧಾನದ ಮೇಲೆ ದಾಳಿ ನಡೆಸುವ ಷಡ್ಯಂತ್ರದ ಬಗ್ಗೆ ಕಾರ್ಯಕರ್ತರು ಎಚ್ಚರವಹಿಸಬೇಕೆಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ದಲಿತ ಚಳುವಳಿಗಳು ರಾಜ್ಯದಲ್ಲಿ ಶೋಷಿತರ ಧ್ವನಿಯಾಗಿ ಕೆಲಸ ಮಾಡಿವೆ. ದಲಿತ ಸಂಘಟನೆಗಳೆಲ್ಲವೂ ಒಗ್ಗೂಡಿ ಮರುಹುಟ್ಟು ಪಡೆದುಕೊಂಡು ಹಿಂದಿನ ಶಕ್ತಿ ಪಡೆದು ಕೊಳ್ಳಬೇಕಿದೆ. ಈ ಕುರಿತು ಐಕ್ಯತಾ ಸಮಿತಿ ರಚನೆಯಾಗಿದ್ದು, ಸಂಘಟನೆಗಳ ಮುಖಂಡರೆಲ್ಲ ಒಗ್ಗೂಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್, ಸಿದ್ದರಾಜು ದೊಡ್ಡಿನವಾಡಿ, ಕಾರಹಳ್ಳಿ ಶ್ರೀನಿವಾಸ, ಜಿಲ್ಲಾ ಸಂಘಟನಾ ಸಂಚಾಲಕ ಉದ್ದೇಬೋರನಹಳ್ಳಿ ರಮೇಶ್, ಮಂಜಯ್ಯ ಬಾಚಿಗನಹಳ್ಳಿ, ಕಂಡಪ್ಪ ತೊಂಡುವಳ್ಳಿ, ಮಂಜುನಾಥ ಮೂಡಿಗೆರೆ, ಜಿಲ್ಲಾ ಖಜಾಂಚಿ ಲಕ್ಯಾ ಸಂತೋಷ, ಮಹಿಳಾ ಮುಖಂಡರಾದ ಆಶಾ, ಶೇಷಮ್ಮ, ಯಶೋಧಮ್ಮ, ಚಿಕ್ಕಮಗಳೂರು ತಾಲೂಕಿನ ಮಂಜುನಾಥ ನಂಬಿಯಾರ್, ಕೊಪ್ಪ ಶೇಖರ್, ನರಸಿಂಹರಾಜಪುರ ರವಿ, ಶೃಂಗೇರಿ ಶಂಕರ್, ಎಸ್ಸಿ.ಎಸ್ಟಿ. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಉಪಸ್ಥಿತರಿದ್ದರು.
"ಜನಪ್ರತಿನಿಧಿಗಳು ಶೋಷಿತರ ಪರ ಚಿಂತಿಸುತ್ತಿಲ್ಲ "
24 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾವಳ್ಳಿ ಶಂಕರ್ ಅವರು ಮಾತನಾಡಿದರು. ಎಂ. ರುದ್ರಸ್ವಾಮಿ, ರಮೇಶ್, ಸಿದ್ದರಾಜು, ಲಕ್ಷ್ಮಣ್, ಬಸವರಾಜ್ ಇದ್ದರು.