ಕನ್ನಡಪ್ರಭ ವಾರ್ತೆ ಕೆಜಿಎಫ್ಬಿಜಿಎಂಎಲ್ ಭಾಗದಲ್ಲಿ ಚಿನ್ನದ ನಿಕ್ಷೇಪವಿದೆಯೇ ಎಂಬುದನ್ನು ಸರ್ವೇ ನಡೆಸಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು, ಖಾಸಗಿ ಏಜೆನ್ಸಿಯು ಇಲ್ಲಿ ಯಾವುದೇ ಚಿನ್ನದ ನಿಕ್ಷೇಪವಿಲ್ಲ ಎಂದು ವರದಿ ನೀಡಿದೆ. ಆದ್ದರಿಂದ ಮತ್ತೆ ಬಿಜಿಎಂಎಲ್ ಪ್ರಾರಂಭವಾಗುವುದು ಸಂದೇಹವಾಗಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
೨೦ ಲಕ್ಷ ವೆಚ್ಚದಲ್ಲಿ ಮೈದಾನ ಶುದ್ದಿಕರಣ:
ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗಿದ್ದ ಜಿಮ್ಕಾನ ಮೈದಾನ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಬಳಸಲು ಸೇವ್ ಕೆಜಿಎಫ್ ಸದಸ್ಯರು ಸಂಸದರನ್ನು ಒತ್ತಾಯ ಮಾಡಿದ್ದರು. ಅದರಂತೆ ಕ್ರೀಡಾಂಗಣವನ್ನು ಬಿಜಿಎಂಎಲ್‌ನ ಸಿಎಸ್‌ಒರೊಂದಿಗೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಳಿಕ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ಕೃಷ್ಣಾ ನದಿ ನೀರು ಬಗ್ಗೆ ಪರಿಶೀಲನೆಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯ ಬಳಿ ನಿರ್ಮಿಸಲಾಗಿರುವ ಕೃಷ್ಣಾ ನದಿ ಡ್ಯಾಂನಿಂದ ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಆ ನೀರನ್ನು ಕೋಲಾರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮದನಪಲ್ಲಿಗೆ ಭೇಟಿ ನೀಡಿ ಡ್ಯಾಂನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಎಷ್ಟು ಮತ್ತು ನೀರು ಕೋಲಾರ ಜಿಲ್ಲೆಗೆ ಹರಿಸುವ ಬಗೆಗಿನ ಸಾಧಕ ಬಾಧಕಗಳ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಆಂಧ್ರ ಸಿಎಂ, ಡಿಸಿಎಂ ಜತೆ ಚರ್ಚೆಮುಂಬರುವ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಚಿಂತಾಮಣಿಗೆ ಬರುತ್ತಿದ್ದು ಆ ಸಂದರ್ಭದಲ್ಲಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ಅಲ್ಲದೇ ಇದೇ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರ ಜತೆ ಮಾತನಾಡಿ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ರಾಜೇಂದ್ರನ್, ನಗರಸಭೆ ಸದಸ್ಯ ಪಾಂಡಿಯನ್ ಮೊದಲಾದವರು ಹಾಜರಿದ್ದರು.