ಪದವಿ ಕಾಲೇಜಿನ ಆರಂಭದ ದಿನಗಳು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ಮಹತ್ವದ ಘಟ್ಟವಾಗಿವೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಪರಿಶ್ರಮ, ನಂಬಿಕೆ ಹಾಗೂ ನಿಷ್ಠೆಯಿಂದ ಮುನ್ನಡೆಯಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಮುಖ್ಯಸ್ಥ ಎನ್. ಆನಂದಗೌಡ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಬಿಜಿಎಸ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಗುರಿಯನ್ನು ಹೊಂದಿರಬೇಕು. ಗುರಿ ಸಾಧನೆಗೆ ಸಮಯದ ಜೊತೆಗೆ ನಿರಂತರ ಪರಿಶ್ರಮ, ಆತ್ಮವಿಶ್ವಾಸ, ನಂಬಿಕೆ ಮತ್ತು ನಿಷ್ಠೆ ಅಗತ್ಯ. ಇವೆಲ್ಲವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುರಿಯತ್ತ ಯಶಸ್ವಿಯಾಗಿ ಹೆಜ್ಜೆ ಹಾಕಲು ಸಾಧ್ಯ ಎಂದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಮಠಾಧ್ಯಕ್ಷ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಶಿಕ್ಷಣವು ಕೇವಲ ಅಂಕ ಗಳಿಸುವ ಅಥವಾ ಉದ್ಯೋಗ ಪಡೆಯುವ ಸಾಧನವಲ್ಲ. ಅದು ವಿದ್ಯಾರ್ಥಿಗಳಲ್ಲಿ ಜ್ಞಾನ, ವಿನಯ, ಉತ್ತಮ ವ್ಯಕ್ತಿತ್ವ ಹಾಗೂ ಗಾಂಭೀರ್ಯವನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು.
ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಲೇಜಿನ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಮೈಸೂರು ವಿಶ್ವ ವಿದ್ಯಾಲಯದ ಮಂಜುನಾಥ್, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಚಂದ್ರೇಗೌಡ, ವೈದ್ಯ ಡಾ. ಸೋಮಣ್ಣ, ಕೃಷ್ಣೇಗೌಡ, ನರಸಿಂಹೇಗೌಡ, ಅಧ್ಯಯನ ಕೇಂದ್ರದ ಡೀನ್ ಪೂರ್ಣಚಂದ್ರ, ಎ.ಜೆ. ಕಾಳೇಗೌಡ, ಬೊಪ್ಪನಹಳ್ಳಿ ಭಾಸ್ಕರ್, ಕೆಂಡಗಣ್ಣಸ್ವಾಮಿ, ಡಿ. ವೆಂಕಟೇಗೌಡ, ಲಿಂಗೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ್, ಡಿ.ಸಿ. ಸ್ವಾಮಿ, ಚಕ್ಕಣ್ಣೇಗೌಡ, ಪ್ರಾಂಶುಪಾಲ ಜೆ.ಎನ್. ವೆಂಕಟೇಶ್, ಭೈರೆಗೌಡ, ಎ.ಸಿ. ಭೈರಪ್ಪ, ಚನ್ನಕೇಶವನಾಯಕ, ರಾಜೇಶ್, ಕಲ್ಲೇಶ್ಗೌಡ, ಅಂಕಪ್ಪ, ಸಿದ್ದರಾಜು ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.