ಕನ್ನಡಪ್ರಭ ವಾರ್ತೆ ಕಾಗವಾಡತಾಲೂಕಿನ ಶೇಡಬಾಳ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚರಿಸಿರುವ ಶಂಕೆಗೆ ಕಾರಣವಾಗುವ ಬೃಹತ್ ಗಾತ್ರದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಪಟ್ಟಣದ ನಿವಾಸಿಗಳು ಹಾಗೂ ಕೃಷಿಕರಲ್ಲಿ ಆತಂಕ ಮೂಡಿದೆ.
ಕನ್ನಡಪ್ರಭ ವಾರ್ತೆ ಕಾಗವಾಡ
ತಾಲೂಕಿನ ಶೇಡಬಾಳ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚರಿಸಿರುವ ಶಂಕೆಗೆ ಕಾರಣವಾಗುವ ಬೃಹತ್ ಗಾತ್ರದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಪಟ್ಟಣದ ನಿವಾಸಿಗಳು ಹಾಗೂ ಕೃಷಿಕರಲ್ಲಿ ಆತಂಕ ಮೂಡಿದೆ.ಸೋಮವಾರ ಬೆಳಗ್ಗೆ ಜಮೀನುಗಳತ್ತ ತೆರಳಿದ್ದ ರೈತರಿಗೆ ಹೊಲದ ಬದುವಿನಲ್ಲಿ ವನ್ಯಮೃಗದ ಹೆಜ್ಜೆ ಗುರುತುಗಳು ಕಂಡುಬಂದಿವೆ. ಇವು ಚಿರತೆಯ ಹೆಜ್ಜೆ ಗುರುತುಗಳಿರಬಹುದು ಎಂದು ಶಂಕಿಸಿದ ರೈತರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ರಾಕೇಶ ಅರ್ಜುನವಾಡ ನೇತೃತ್ವದ ತಂಡ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿತು. ಚಿರತೆ ಯಾವ ಪ್ರದೇಶದಲ್ಲಿ ಸಂಚರಿಸುತ್ತಿದೆ ಎಂಬುದನ್ನು ಪತ್ತೆಹಚ್ಚಲು ಅರಣ್ಯ ಸಿಬ್ಬಂದಿ ಸುತ್ತಮುತ್ತಲಿನ ತೋಟಗಳು ಹಾಗೂ ಕಬ್ಬಿನ ಗದ್ದೆಗಳಲ್ಲಿ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಚಿರತೆ ಸಂಚಾರದ ಶಂಕೆ ಹಿನ್ನೆಲೆಯಲ್ಲಿ ಶೇಡಬಾಳ ಪಟ್ಟಣ ಪಂಚಾಯಿತಿ ವತಿಯಿಂದ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.ರಾತ್ರಿ ಹಾಗೂ ಮುಂಜಾನೆ ವೇಳೆ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಸಂಚರಿಸದಂತೆ ಹಾಗೂ ಸಣ್ಣ ಮಕ್ಕಳು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸುವಂತೆ ಸೂಚಿಸಲಾಗಿದೆ. ಚಿರತೆ ಕಂಡುಬಂದಲ್ಲಿ ಸಾರ್ವಜನಿಕರು ಗುಂಪುಗೂಡಿ ಅದನ್ನು ಹಿಂಬಾಲಿಸುವುದು ಅಥವಾ ಕೆಣಕುವ ಸಾಹಸ ಮಾಡದೆ, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಪಪಂ ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಮನವಿ ಮಾಡಿದ್ದಾರೆ.ಚಿರತೆ ಭೀತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಬೋನು ಅಳವಡಿಸಿ, ಕಾಗವಾಡ ತಾಲೂಕಿನ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.