ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿದೆ: ಡಾ.ಜೆ.ಎನ್.ರಾಮಕೃಷ್ಣೇಗೌಡ

KannadaprabhaNewsNetwork | Published : Dec 13, 2024 12:47 AM

ಸಾರಾಂಶ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರನ್ನು ಸುಸಂಸ್ಕೃತರನ್ನಾಗಿ ಮಾಡಬೇಕು. ಮಕ್ಕಳನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಬಿಜಿಎಸ್ ಶಿಕ್ಷಣ ಸಂಸ್ಥೆ ಧ್ಯೇಯವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗಾಗಿ ಬಿಜಿಎಸ್ ಕಲರವ ಹಾಗೂ ಪಾದಪೂಜೆ ಕಾರ್‍ಯಕ್ರಮ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಬೆಳೆಸುತ್ತಿದೆ. ಮಕ್ಕಳು ಸಂಸ್ಕಾರವಂತರಾಗಿ ತಂದೆ-ತಾಯಿಗೆ ಗೌರವ ತಂದುಕೊಡಬೇಕು ಎಂದು ಹೇಮಗಿರಿ ಶಾಖಾ ಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಬಿಜಿಎಸ್ ಕಲರವ ಹಾಗೂ ಪಾದಪೂಜೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರನ್ನು ಸುಸಂಸ್ಕೃತರನ್ನಾಗಿ ಮಾಡಬೇಕು. ಮಕ್ಕಳನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಬಿಜಿಎಸ್ ಶಿಕ್ಷಣ ಸಂಸ್ಥೆ ಧ್ಯೇಯವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗಾಗಿ ಬಿಜಿಎಸ್ ಕಲರವ ಹಾಗೂ ಪಾದಪೂಜೆ ಕಾರ್‍ಯಕ್ರಮ ನಡೆಸಲಾಗುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಜನ್ಮಕೊಟ್ಟ ತಂದೆತಾಯಿ, ಗುರು-ಹಿರಿಯರಿಗೆ ಗೌರವ ಕೊಡುವುದೆ ಕಡಿಮೆ. ಪೋಷಕರು, ಗುರು-ಹಿರಿಯರಿಗೆ ಗೌರವ ಕೊಡಬೇಕು. ಅದಕ್ಕಾಗಿಯೇ ಎಲ್ಲಾ ಸಂಸ್ಥೆಗಳಲ್ಲೂ ಮಕ್ಕಳಿಂದ ಪೋಷಕರಿಗೆ ಪಾದಪೂಜೆ ನಡೆಸುವ ಮೂಲಕ ಸಂಸ್ಕಾರ ಬೆಳೆಸುತ್ತಿದ್ದೇವೆ ಎಂದರು.

ಮಕ್ಕಳು ಸಂಸ್ಕಾರವನ್ನು ಬೆಳೆಸಿಕೊಂಡು ಮುನ್ನಡೆಯಬೇಕು. ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಸಮಾಜಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕು. ಜನ್ಮಕೊಟ್ಟ ತಂದೆತಾಯಿಗೆ ಗೌರವ ತಂದುಕೊಡಬೇಕು. ತಮ್ಮ ವಂಶದ ಕೀರ್ತಿ ಬೆಳಗುವ ಕೆಲಸ ಮಾಡಬೇಕು ತಿಳಿಸಿದರು.

ಮೊಬೈಲ್, ದೃಶ್ಯ ಮಾಧ್ಯಮಗಳು ಹಾಗೂ ಆಸೆ, ವ್ಯಾಮೋಹಗಳಿಗೆ ಒಳಗಾಗಿ ಮಕ್ಕಳು ತಮ್ಮ ಭವಿಷ್ಯವನ್ನು ನಾಶ ಮಾಡಿಕೊಳ್ಳಿದ್ದಾರೆ. ಹಾಗಾಗಿ ಮಕ್ಕಳು ಸಾಧ್ಯವಾದಷ್ಟು ಇಂತಹ ದುಶ್ಚಟಗಳಿಂದ ದೂರ ಇರಬೇಕು. ಮುಂದಿನ ದಿನಗಳಲ್ಲಿ ಪರೀಕ್ಷೆ ಹತ್ತಿರ ಬರುತ್ತಿದೆ. ಸಂಸ್ಕೃತಿಕ ಕಾರ್‍ಯಕ್ರಮ ಮುಗಿದ ಬಳಿಕ ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್‍ಯಕ್ರಮದಲ್ಲಿ ಬೆಳಗ್ಗೆ ಪಿಯುಸಿ ಮಕ್ಕಳಿಂದ ಪೋಷಕರಿಗೆ ಪಾದಪೂಜೆ ಮಾಡಿಸುವ ಕಾರ್‍ಯಕ್ರಮ ನಡೆಯಿತು. ನಂತರ ಮಧ್ಯಾಹ್ನ ನಡೆದ ಬಿಜಿಎಸ್ ಕಲರವ ಮಕ್ಕಳು ಹಾಡುಗಳಿಗೆ ನೃತ್ಯ ಮಾಡುವ ಮೂಲಕ ರಂಜಿಸಿದರು. ಮಕ್ಕಳ ನೃತ್ಯ ಪ್ರದರ್ಶನವನ್ನು ಕಂಡು ಪೋಷಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ್, ಉಪನ್ಯಾಸಕ ರಾಮಕೃಷ್ಣೇಗೌಡ, ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹದೇವು, ಪ್ರೌಢಶಾಲಾ ಮುಖ್ಯಶಿಕ್ಷಕ ರಘು ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article