ಏಪ್ರಿಲ್ ತಿಂಗಳಲ್ಲಿ ಬತ್ತಿದ ಬೋರ್‌ವೆಲ್ । ರಾಜೀವ್ ನಗರದ 38 ಮನೆಗಳಿಗೆ ಟ್ಯಾಂಕರ್ ನೀರು । ಭದ್ರಾ ಹಿನ್ನೀರಿನಿಂದ ಬೋರ್‌ವೆಲ್ ಅಂತರ್ಜಲ ಹೆಚ್ಚಳ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಪಟ್ಟಣದ ಜನತೆಗೆ 38 ಕೊಳವೆ ಬಾವಿಗಳಿಂದ ಶುದ್ಧವಾದ ಕುಡಿವ ನೀರನ್ನು ಪಟ್ಟಣ ಪಂಚಾಯಿತಿ ಒದಗಿಸುತ್ತಿದ್ದು, ಇದರಲ್ಲಿ ರಾಜೀವ್ ನಗರದ ಒಂದು ಕೊಳವೆ ಬಾವಿ ಬತ್ತಿ ಹೋಗಿದ್ದು ಅಲ್ಲಿನ 37 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.ಜಿಲ್ಲೆಯ ಉಳಿದ ಪಟ್ಟಣಕ್ಕೆ ಹೋಲಿಕೆ ಮಾಡಿದರೆ ನರಸಿಂಹರಾಜಪುರ ಪಟ್ಟಣದಲ್ಲಿ ಸದ್ಯಕ್ಕೆ ಅಂತಹ ಕುಡಿಯುವ ನೀರಿನ ಕೊರತೆ ಎದುರಾಗಿಲ್ಲ. ಪಟ್ಟಣದ 11 ವಾರ್ಡ್‌ಗಳಲ್ಲಿ 1402 ನಲ್ಲಿ ಸಂಪರ್ಕ ಇದೆ. 38 ಕೊಳವೆ ಬಾವಿಗಳಿದ್ದು ಇದರ ಮೂಲಕ 4 ಓವರ್ ಹೆಡ್ ಟ್ಯಾಂಕಿಗೆ ನೀರು ಸರಬರಾಜು ಮಾಡಿ ಆ ಟ್ಯಾಂಕಿನಿಂದ ಜನರಿಗೆ ನೀರು ನೀಡಲಾಗುತ್ತದೆ. ಪಟ್ಟಣದ ಅತಿ ದೊಡ್ಡ ಓವರ್ ಹೆಡ್ ಟ್ಯಾಂಕ್ ಬಸ್ ನಿಲ್ದಾಣ ಸಮೀಪವಿದೆ. ಆ ಟ್ಯಾಂಕಿನಲ್ಲಿ 2 .50 ಲಕ್ಷ ಲೀಟರ್ ನೀರು ಸಂಗ್ರಹವಾದರೆ, ಪ್ರವಾಸಿ ಮಂದಿರ ಸಮೀಪದ ಇನ್ನೊಂದು ಟ್ಯಾಂಕಿಗೆ 1.50 ಲಕ್ಷ ಲೀಟರ್ ನೀರು ಸಂಗ್ರಹವಾಗಲಿದೆ. ಹಾಗೆಯೇ ಬಸ್ತಿಮಠ ಸಮೀಪ ಟ್ಯಾಂಕಿಗೆ 75 ಸಾವಿರ ಲೀಟರ್, ಬೆಟಗೇರಿ ಟ್ಯಾಂಕಿನಲ್ಲಿ 2 ಲಕ್ಷ ಲೀಟರ್ ನೀರು ಸಂಗ್ರಹ ವಾಗಲಿದೆ. 13 ನೀರು ಗಂಟಿಗಳು ಪ್ರತಿನಿತ್ಯ ಪಟ್ಟಣದ ಜನತೆಗೆ ನೀರು ಒದಗಿಸುವ ಕೆಲಸ ಮಾಡುತ್ತಾರೆ. ಪ್ರತಿ ನಿತ್ಯ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ನೀರು ಬಿಡುತ್ತಾರೆ.
ನರಸಿಂಹರಾಜಪುರ ಪಟ್ಟಣದ ವಿಶೇಷ ಎಂದರೆ ಇಲ್ಲಿ 200 ರಿಂದ 300 ಅಡಿಗೆ ಬೋರ್ ವೆಲ್ ಕೊರೆದರೆ ನೀರು ಸಿಗುತ್ತದೆ. ಇದಕ್ಕೆ ಮುಖ್ಯಕಾರಣ ಪಟ್ಟಣದ ಸುತ್ತ ಆವರಿಸಿಕೊಂಡಿರುವ ಭದ್ರಾ ಹಿನ್ನೀರು. 1965ರ ಸುಮಾರಿಗೆ ಲಕ್ಕವಳ್ಳಿಯಲ್ಲಿ ಭದ್ರಾ ನದಿಗೆ ಅಡ್ಡವಾಗಿ ಭದ್ರಾ ಡ್ಯಾಂ ಕಟ್ಟಿದ್ದರಿಂದ ನರಸಿಂಹರಾಜಪುರ ಪಟ್ಟಣ ಅರ್ಧ ಮುಳುಗಡೆಯಾಗಿದೆ. ಪಟ್ಟಣದ ಹತ್ತಿರ ದಲ್ಲೇ ಭದ್ರಾ ಹಿನ್ನೀರು ಇರುವುದರಿಂದ ಸಹಜವಾಗೇ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿದೆ. ಭದ್ರಾ ಹಿನ್ನೀರು ಬೋರ್ ವೆಲ್‌ಗಳಿಗೆ ವರವಾಗಿದ್ದು ಅಂತರ್ಜಲ ಹೆಚ್ಚಿದೆ. ಇತಿಹಾಸ ಗಮನಿಸಿದರೆ ಕಳೆದ 30- 40 ವರ್ಷಗಳಿಂದಲೂ ಪಟ್ಟಣಕ್ಕೆ ಬೋರ್ ವೆಲ್‌ಗಳೇ ಕುಡಿವ ನೀರಿಗೆ ಆಧಾರವಾಗಿದೆ. ಆದರೆ, ಈ ವರ್ಷ ಬರಗಾಲ ವಾದ್ದರಿಂದ ಸಹಜವಾಗೇ ಬೋರ್ ವೆಲ್ ನೀರು ಕಡಿಮೆಯಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.
ರಾಜೀವ್ ನಗರದ ಒಂದು ಬೋರ್‌ವೆಲ್ ಬಿಟ್ಟರೆ ಉಳಿದ 37 ಬೋರ್‌ವೆಲ್ ನಿಂದಲೇ ಪಟ್ಟಣದ ಜನರಿಗೆ ಕುಡಿವ ನೀರು ಸಿಗುತ್ತಿದೆ. ರಾಜೀವ್ ನಗರದ 37 ಮನೆಗಳಿಗೆ ಸುಂಕದ ಕಟ್ಟೆ ಬೋರ್‌ವೆಲ್‌ನಿಂದ ನೀರು ತಂದು ಅಲ್ಲಿನ ನಿವಾಸಿಗಳಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ಆ ವಾರ್ಡಿನ ಸದಸ್ಯ ಸೋಜ.
ಹವಾಮಾನ ವೈಪರೀತ್ಯ, ಪದೇ, ಪದೇ ಬರಗಾಲ ಬರುತ್ತಿರುವುದರಿಂದ ಅಂತರ್ಜಲ ಕಡಿಮೆಯಾಗಿ ಬೋರ್‌ವೆಲ್ ಕೈ ಕೊಟ್ಟರೆ ಪರ್ಯಾಯವಾಗಿ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಬೇಕು ಎಂಬುದು ಸಹ ಪಟ್ಟಣ ಪಂಚಾಯಿತಿಗೆ ಚಿಂತನೆಯಾಗಿದೆ. ಹಲವಾರು ವರ್ಷಗಳ ಹಿಂದೆ ಹೊಸ ಸೇತುವೆ ಸಮೀಪದಲ್ಲಿ ಬ್ಯಾರೇಜ್ ಕಟ್ಟಿ ಶಾಶ್ವತ ಕುಡಿವ ನೀರಿನ ಯೋಜನೆ ಮಾಡಿದ್ದರೂ ಯಶಸ್ಸು ಕಾಣದೆ ಪಟ್ಟಣಕ್ಕೆ ನೀರು ಸಿಗಲಿಲ್ಲ. ಭದ್ರಾ ಹಿನ್ನೀರಿನಿಂದಲೂ ನೀರು ತಂದು ಶಾಶ್ವತ ಕುಡಿವ ನೀರಿನ ಯೋಜನೆಗೂ ಚಿಂತನೆ ನಡೆಸಲಾಗಿತ್ತು. ಈಗ ಮುತ್ತಿನಕೊಪ್ಪದ ತುಂಗಾ ನದಿಯಿಂದ ನೀರು ತಂದು ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಲೂ ಚಿಂತನೆ ನಡೆಸಲಾಗುತ್ತಿದೆ.--ಕೋಟ್...1...
- ಪ್ರಶಾಂತಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಪಂ ನರಸಿಂಹರಾಜಪುರಕೋಟ್.....2...
- ಆರ್.ವಿ.ಮಂಜುನಾಥ್, ಮುಖ್ಯಾಧಿಕಾರಿ, ಪಪಂ ನರಸಿಂಹರಾಜಪುರಕೋಟ್...3 .....
- ಜುಬೇದ, ಪಪಂ ಸದಸ್ಯ, ನರಸಿಂಹರಾಜಪುರ