ಕುಶಾಲನಗರ ಪಟ್ಟಣದ ರಸೂಲ್ ಬಡಾವಣೆ ಹಿಂಭಾಗದ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಈಜಲು ತೆರಳಿದ ಇಬ್ಬರು ಯುವಕರು ನದಿ ನೀರಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಬುಧವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪಟ್ಟಣದ ರಸೂಲ್ ಬಡಾವಣೆ ಹಿಂಭಾಗದ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಈಜಲು ತೆರಳಿದ ಇಬ್ಬರು ಯುವಕರು ನದಿ ನೀರಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಬುಧವಾರ ಸಂಜೆ ನಡೆದಿದೆ.ನಾಗಾಲ್ಯಾಂಡ್ ಮೂಲದ ನಿವಾಸಿಗಳಾದ ಬೋಸಸ್ ಕುಂಚಾಂಗ್ (23), ಮತ್ತು ಯಾನ್ಕಾಂಗ್ (27) ನೀರಿನಲ್ಲಿ ಮುಳುಗಿರುವುದಾಗಿ ನದಿ ತಟದಲ್ಲಿದ್ದ ಅವರ ಜೊತೆಗಾರ್ತಿ ಆಚಿ ಎಂಬ ಯುವತಿ ಮಾಹಿತಿ ನೀಡಿದ್ದಾರೆ.
ಯುವಕರು ಕುಶಾಲನಗರದ ಮೈಸೂರು ರಸ್ತೆಯಲ್ಲಿರುವ ಬೆಂದೂಟ ಹೋಟೆಲ್ ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು ಸಂಜೆ 5 ಗಂಟೆಗೆ ಪಟ್ಟಣದ ರಸುಲ್ ಬಡಾವಣೆಯ ಹಿಂಭಾಗದ ವ್ಯಾಪ್ತಿಯಲ್ಲಿರುವ ನದಿಗೆ ಈಜಲು ತೆರಳಿದ್ದಾರೆ.ಯುವಕರು ನೀರಲ್ಲಿ ಈಜಲು ತೆರಳಿದ್ದು ಈ ಸಂದರ್ಭ ಜೊತೆಗೆ ತೆರಳಿದ್ದ ಯುವತಿ ನದಿ ತಟದಲ್ಲಿ ಕುಳಿತುಕೊಂಡು ತನ್ನ ಮೊಬೈಲ್ ನಲ್ಲಿ ಇಬ್ಬರ ಫೋಟೋ ಕ್ಲಿಕ್ಕಿಸುತ್ತಿದ್ದ ವೇಳೆ ನೀರಿನಲ್ಲಿ ಇಬ್ಬರು ಮುಳುಗಿರೋದಾಗಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕುಶಾಲನಗರ ಟೌನ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಣ್ಣ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.ಸಂಜೆಗತ್ತಲು ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲು ಅಸಾಧ್ಯವಾಗಿದ್ದು ಬೆಳಗಿನ ವೇಳೆ ಪತ್ತೆ ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.