ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಮೊದಲ ಬಾರಿಗೆ ಬಯಲ ನಾಡಿಗೆ ಎಂಟ್ರಿ ಕೊಟ್ಟಿದ್ದ ಭದ್ರೆ ಇನ್ನೇನು ತನ್ನ ಮೊದಲ ಪಯಣವನ್ನು ಶೀಘ್ರ ಮುಗಿಸಲಿದ್ದಾಳೆ. ಚಿತ್ರದುರ್ಗ ಶಾಖಾ ಕಾಲುವೆಗೆ ಪರೀಕ್ಷಾರ್ಥ ಮೂರು ಟಿಎಂಸಿ ನೀರು ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಸೆಪ್ಟಂಬರ್ 6 ರಿಂದ ಅಕ್ಟೋಬರ್ 6ರ ತನಕ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ ಎರಡು ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಲಿಪ್ಟ್ ಮಾಡಿ ಕಾಲುವೆಗೆ ಹರಿಸಲಾಗಿದೆ. ಇನ್ನೊಂದು ಟಿಎಂಸಿ ಮಾತ್ರ ಬಾಕಿ ಇದೆ.
ಮೊದಲ ಹಂತದಲ್ಲಿ ನೀರು ಪಡೆಯುವಲ್ಲಿ ಎಂದಿನಂತೆ ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ತಾಲೂಕುಗಳು ಅಗ್ರ ಸ್ಥಾನದಲ್ಲಿದ್ದರೆ ಚಿತ್ರದುರ್ಗದ್ದು ದಯನೀಯ. ಡಿಪಿಆರ್ ಪ್ರಕಾರ ಹಿರಿಯೂರು ತಾಲೂಕಿನಲ್ಲಿ 12 ಕೆರೆಗೆ ನೀರು ತುಂಬಿಸಬೇಕಾಗಿದ್ದು ಇದರಲ್ಲಿ ಏಳು ಕೆರೆಗಳು ಭರ್ತಿಯಾಗಿವೆ. ಇನ್ನೂ ಐದು ಕೆರೆಗಳು ಭರ್ತಿ ನಿರೀಕ್ಷೆಯಲ್ಲಿವೆ. ಹಾಗೆ ನೋಡಿದರೆ ಭದ್ರೆ ಹಿರಿಯೂರು ತಾಲೂಕಿನ ರೈತರ ಅಲ್ಪ ಅವಧಿಯಲ್ಲಿಯೇ ಸಂತೃಪ್ತಗೊಳಿಸಿದ್ದಾಳೆ. ಹಳ್ಳಗಳ ಮೂಲಕವೇ ಭದ್ರೆ ಹರಿದು ಕೆರೆಗಳ ತುಂಬಿಸುತ್ತಿರುವುದರಿಂದ ಸಹಜವಾಗಿಯೇ ಅಂತರ್ಜಲ ಹೆಚ್ಚಾಗುತ್ತಿದೆ. ಹಳ್ಳದೆ ದಂಡೆಯಲ್ಲಿ ಬಸಿ ನೀರು ಶುರುವಾಗಿದೆ. ತಾಲೂಕಿನ ತವಂದಿ ಕೆರೆ, ಔಟ್ ಲೆಟ್‌ನಿಂದ 16 ಕಿಮೀ ದೂರದಲ್ಲಿದೆ. ಹಳ್ಳಕ್ಕೆ ನೀರು ಬಿಟ್ಟು ತವನಿಧಿ ಕೆರೆ ತುಂಬಿಸುತ್ತಿರುವುದರಿಂದ ಭೂಮಿ ಕುಡಿದು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿದೆ.ಹೊಳಲ್ಕೆರೆ ತಾಲೂಕಿನ 30 ಕೆರೆಗಳಲ್ಲಿ ಗ್ರಾವಿಟಿಯಲ್ಲಿ 20 ಕೆರೆಗಳಿಗೆ ನೀರು ಹೋಗಿದೆ. ಲಿಪ್ಟ್ ಮೂಲಕ ಏಳು ಕೆರೆಗಳಿಗೆ ನೀರು ಹಾಯಿಸಬೇಕಿದ್ದು ನಾಲ್ಕು ಬಾಕಿ ಇವೆ. ಕುಡಿನೀರ ಕಟ್ಟೆ ಬಳಿ ಎರಡು ದಿನಗಳ ಹಿಂದೆಯಷ್ಟೇ ಲಿಫ್ಟ್ ಮಾಡುವಾಗ ಪೈಪು ಹೊಡೆದು ಶಿವಮೊಗ್ಗ ರಸ್ತೆಯಲ್ಲಿ ನೀರು ಚಿಮ್ಮಿತ್ತು. ಇಡೀ ತಾಲೂಕಿಗೆ ಪೈಪುಗಳ ಮೂಲಕ ನೀರು ಹಾಯಿಸುತ್ತಿರುವುದರಿಂದ ಭೂಮಿ ಕುಡಿಯಲು ಅವಕಾಶವಿಲ್ಲ.
ಎಂದಿನಂತ ಚಿತ್ರದುರ್ಗದ ಕೆರೆಗಳು ಇಡೀ ನೀರು ಹಂಚಿಕೆಯ ವ್ಯವಸ್ಥೆಯ ದಿಟ್ಟಿರಿಸಿ ನೋಡುತ್ತಿವೆ. ಗೋನೂರು ಕೆರೆಗೆ ನೀರು ಎಂದು ಅಬ್ಬರದ ಪ್ರಚಾರ ಪಡೆದ ಭದ್ರೆ ಕೇವಲ ದ್ಯಾಮವ್ವನಹಳ್ಳಿ ಕೆರೆ ಮಾತ್ರ ತುಂಬಿಸಿದ್ದಾಳೆ. ಗೋನೂರು ಕೆರೆಗೆ ಮಲ್ಲಾಪುರ ಕೆರೆ ನೀರು ಹೋಗಿ ಸದಾ ಅರ್ಧದಷ್ಟಿರುತ್ತದೆ. ದ್ಯಾಮೇನಹಳ್ಳಿಯಿಂದ ಕಲ್ಲಹಳ್ಳಿಗೆ ನೀರು ಹರಿದಿದ್ದು ಹರಿವಿಕೆ ಪ್ರಮಾಣ ಕೂಡಾ ನೀರಸವಾಗಿದೆ.