ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸೇವಾ ಜ್ಯೋತಿ ಯಾತ್ರೆ ಮತ್ತು ವಿಕಸಿತ ಭಾರತ ಸಂಕಲ್ಪ ಸಭೆ ಯನ್ನು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಿಬಿಐ, ಇಡಿ, ಚುನಾವಣಾ ಆಯೋಗ ಹಾಗೂ ನ್ಯಾಯಾಂಗದಂತಹ ಸ್ವಾಯತ್ತ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಅಪನಂಬಿಕೆ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಚಿತ್ರದುರ್ಗ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿ ವತಿ ಯಿಂದ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರ 25 ವರ್ಷಗಳ ಸುದೀರ್ಘ ಜನಪರ ಆಡಳಿತದ ಸೇವಾ ಜ್ಯೋತಿ ಯಾತ್ರೆ ಮತ್ತು ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನೂ ಪ್ರಶ್ನಿಸುವ ಹಂತಕ್ಕೆ ತಲುಪಿದೆ ಎಂದರು.
ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದಕ್ಕೆ ಮತದಾರರು ತಮ್ಮ ನೆಲೆ ಅಥವಾ ಊರುಗಳ ಆಯ್ಕೆ ಕಾರಣವೇ ಹೊರತು ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆದರೆ ಇದನ್ನು ಕಾಂಗ್ರೆಸ್ ದೊಡ್ಡ ಹಗರಣ ದಂತೆ ಬಿಂಬಿಸಿ ಸುಳ್ಳು ವದಂತಿ ಹರಡುತ್ತಿದೆ ಎಂದು ದೂರಿದರು.
ನಮ್ಮ ದೇಶಕ್ಕೆ ಹೊರಗಿನ ಶತೃಗಳ ಭಯಕ್ಕಿಂತ ದೇಶದ ಒಳಗಿನ ಶತೃಗಳಿಂದ ಭಯ ಇದೆ. ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ದೇಶದಲ್ಲಿ ನಕ್ಸಲಿಸಂ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಹದ್ದುಬಸ್ತಿನಲ್ಲಿಡಲಾಗಿದೆ. ದೇಶದ ಹೊರಗಿನ ಭದ್ರತೆ ಸುಭದ್ರವಾಗಿದ್ದರೂ, ದೇಶದ ಒಳಗಿನ ಸಾಂವಿಧಾನಿಕ ಸಂಸ್ಥೆಗಳಿಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರ್ ಅಶೋಕ್ ದೂರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸಹಿಸಿ ಕೊಳ್ಳಲಾಗದ ಕಾಂಗ್ರೆಸ್ , ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ಮಾಡುತ್ತಿದೆ ಮತ್ತು ರಾಜ್ಯದಲ್ಲಿ ಸಾಲು ಸಾಲು ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗಿದೆ. ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಬಲವಾದ ಸ್ಥಾನ ಪಡೆದುಕೊಂಡಿದೆ. ದಶಕಗಳ ಕನಸಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ರದ್ದು ಹಾಗೂ ಮುಸ್ಲಿಂ ಮಹಿಳೆಯರ ಹಿತ ಕಾಯುವ ತ್ರಿವಳಿ ತಲಾಕ್ ನಿಷೇಧದಂತಹ ಐತಿಹಾಸಿಕ ನಿರ್ಧಾರಗಳನ್ನು ಪ್ರಧಾನಿ ಮೋದಿ ಕೈಗೊಂಡಿದ್ದಾರೆ. ಇಂದು ಭಾರತದ ಸಮ್ಮತಿಯಿಲ್ಲದೆ ಜಾಗತಿಕ ಮಟ್ಟದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಆಡಳಿತದಲ್ಲಿ ರಾಜ್ಯದ ಜನತೆ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ವಿದ್ಯುತ್, ಹಾಲಿನದರ ಹಾಗೂ ಬಸ್‍ದರಗಳನ್ನು ಸಾಲು ಸಾಲಾಗಿ ಏರಿಸಲಾಗುತ್ತಿದೆ. ಹಾಲಿನ ದರ ಏರಿಕೆಯನ್ನು ರೈತರ ಹಿತದೃಷ್ಟಿಯಿಂದ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆಯಾದರೂ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಲೀಟರ್ ಗೆ 3 ರೂಪಾಯಿ ಹೆಚ್ಚುವರಿ ಸಬ್ಸಿಡಿಯನ್ನು ರೈತರಿಗೆ ನೀಡಲು ಅವರ ಬಳಿ ಹಣವಿಲ್ಲ.ಬೆಲೆ ಏರಿಕೆ ಜನಸಾಮಾನ್ಯರ ಹಿತಕ್ಕಾಗಿಯಲ್ಲ, ಬದಲಿಗೆ ಲೂಟಿ ಹೊಡೆಯಲು ಮಾಡಲಾಗುತ್ತಿದೆ ಎಂದರು.
ಸಂಸದರಾಗಿದ್ದವರು ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬೀದಿಯಲ್ಲಿ ನಿಂತು ಪ್ರತಿಭಟಿಸುವುದನ್ನು ಬಿಟ್ಟು ಸಂಸತ್ತಿನಲ್ಲಿ ಚರ್ಚಿಸಬೇಕು. ಚುನಾವಣಾ ಆಯುಕ್ತರನ್ನು ವಜಾಗೊಳಿಸಲು ಪಾರ್ಲಿಮೆಂಟ್‍ನಲ್ಲಿ ಚರ್ಚೆ, ನಿಂದನಾ ಪ್ರಸ್ತಾವ ಹಾಗೂ ಬಹುಮತದ ಅಗತ್ಯವಿದ್ದು, ರಾಷ್ಟ್ರಪತಿಯವರ ಅಂಕಿತದ ನಂತರವೇ ಕ್ರಮ ಸಾಧ್ಯ. ಈ ಪರಿಜ್ಞಾನವಿಲ್ಲದೆ ಬೀದಿಗಿಳಿದು ಪ್ರತಿಭಟಿಸುವುದು ಸರಿಯಲ್ಲ ಎಂದು ಅಶೋಕ್ ಹೇಳಿದರು.
ರಾಜ್ಯದಲ್ಲಿ ಎನ್‍ಡಿಎ ಮೈತ್ರಿಕೂಟ ಬಲವಾಗಿದ್ದು, ಮುಂಬರುವ ಎಲ್ಲಾ ಎಂಎಲ್‍ಎ ಹಾಗೂ ಎಂಪಿ ಚುನಾ ವಣೆಗಳನ್ನು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಡಿಯಲ್ಲೇ ಎದುರಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ ಕೆ.ಟಿ.ಕುಮಾರಸ್ವಾಮಿ, ಶಾಸಕರಾದ ಡಾ.ಎಂ.ಚಂದ್ರಪ್ಪ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ದಾವಣಗೆರೆ ವಿಭಾಗ ಸಹಾ ಪ್ರಭಾರಿ ಎ.ಮುರಳಿ, ಮುಖಂಡರಾದ ರಾಜಣ್ಣ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ, ಪಾಪ ನಾಯ್ಕ್, ಅನಿಲ್ ಕುಮಾರ್, ಡಾ.ಪಿ.ಎಂ ಮಂಜುನಾಥ್ ಇದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಸ್ವಾಗತಿಸಿದರು, ಮಾಧುರಿ ಗೀರೀಶ್ ಪ್ರತಿಜ್ಞಾ ವಿಧಿ ಭೋಧಿಸಿದರು, ವೆಂಕಟೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.