ಕೆರೆಗಳಿಗೆ ಭದ್ರಾ ನೀರು: ಹಿರಿಯೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork |  
Published : Feb 11, 2026, 02:00 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು ಎಂದು ನಡೆದ ಹಿರಿಯೂರು ಬಂದ್ ಹಾಗೂ ಧರಣಿ ನಿರತ ರೈತರನ್ನು ಉದ್ದೇಶಿಸಿ ರೈತಸಂಘದ ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸುವ ಕಾರ್ಯ ಶೀಘ್ರವಾಗಿ ಆಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಧರಣಿ ಹಾಗೂ ಹಿರಿಯೂರು ಬಂದ್ ಗೆ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ರೈತರು ಬೈಕ್ ಗಳ ಮೂಲಕ ಸಂಚರಿಸಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕುವಂತೆ ಮನವಿ ಮಾಡಿದರು. ನಂತರ ಗಾಂಧಿ ವೃತ್ತದ ಧರಣಿ ಸ್ಥಳ ತಲುಪಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಹಿರಿಯೂರು ತಾಲೂಕಿನ ಯಾವುದೇ ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ಆಗಿಲ್ಲ. ಈಗಾಗಲೇ ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಕೆರೆಗಳಿಗೆ ಲಿಂಕ್ ಕೊಡುವ ಪೈಪ್‌ಲೈನ್ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಹಿರಿಯೂರು ತಾಲೂಕಿನ ಯಾವುದೇ ಕೆರೆಗಳಿಗೂ ಪ್ರಾಯೋಕವಾಗಿ ನೀರು ಹರಿಸಲು ಬರುವುದಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಹಣ ಮಂಜೂರು ಮಾಡಿ ಕಾಮಗಾರಿ ಆರಂಭಿಸಬೇಕು. ನಮ್ಮ ಶಾಸಕರು ಯಾವ ಮಾತನ್ನೂ ಉಳಿಸಿಕೊಂಡಿಲ್ಲ. ನಾವು ಕಾಟಾಚಾರಕ್ಕೆ ಧರಣಿ ಮಾಡುತ್ತೇವೆ ಎಂದಿದ್ದಾರೆ. ಐಮಂಗಲ ಹೋಬಳಿಗೆ ಫೆಬ್ರವರಿ ತಿಂಗಳಲ್ಲಿ ನೀರು ಬಿಡುತ್ತೇವೆ ಎಂದಿದ್ದರು. ಆದರೆ ಇನ್ನೂ ನೀರು ಬರುವ ಸೂಚನೆ ಕಾಣುತ್ತಿಲ್ಲ.ಬರೀ ಸುಳ್ಳು ಭರವಸೆ ನೀಡುತ್ತಾರೆ. 5300 ಕೋಟಿ ಕೊಡುತ್ತೇನೆ ಎಂದು ಹೇಳಿದ ಕೇಂದ್ರ ಇದುವರೆಗೂ ನಾಕಾಣಿ ಕೊಟ್ಟಿಲ್ಲ. ರಾಜ್ಯದ ಮೇಲೆ ಕೇಂದ್ರ ಕೇಂದ್ರದ ಮೇಲೆ ರಾಜ್ಯ ಆಪಾದನೆ ಮಾಡಿಕೊಂಡು ರೈತರ ಬಾಳಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಬಜೆಟ್ ನಲ್ಲಿ ಹಣವಿಟ್ಟು ತುರ್ತು ಕಾಮಗಾರಿ ಪ್ರಾರಂಭ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣ ನೀಡಬೇಕು. ಕಲುವಳ್ಳಿ ಭಾಗದ ಕಾಮಗಾರಿ ಶೀಘ್ರ ಆರಂಭಿಸಬೇಕು ಇಲ್ಲವೇ ರಾಜೀನಾಮೆ ಕೊಡಬೇಕು.ಜನರನ್ನು ದಾರಿ ತಪ್ಪಿಸುವ ಕೆಲಸ ಕೈಬಿಡಿ. ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲೇಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮತ್ತು ವಿಧಾನ ಸೌಧ ಚಲೋ ಮಾಡುತ್ತೇವೆ. ಮಾರ್ಚ್ ಏಪ್ರಿಲ್ ಒಳಗೆ ಘೋಷಣೆ ಮಾಡಿದ ಹಣ ಬರಬೇಕು. ರೈತರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು.ರೈತರ ಬಗ್ಗೆ ಹೀಗೆಯೇ ಮಾತಾಡಿದರೆ ಬರುವ ದಿನಗಳಿಗೆ ಹಳ್ಳಿಗಳಿಗೆ ಬಂದಾಗ ರೈತರೇ ಬುದ್ದಿ ಕಲಿಸುತ್ತಾರೆ. ತಾಲೂಕಿನ ಪ್ರತಿ ಗ್ರಾಮದಿಂದಲೂ ಮಹಿಳೆಯರು, ಯುವಕರು, ರೈತರು ದೊಡ್ಡ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ತಾಪಂ ಮಾಜಿ ಸದಸ್ಯ ಯಶವಂತ ರಾಜ್ ಮಾತನಾಡಿ, ವ್ಯವಸಾಯದ ಬಗ್ಗೆ ಅರಿವಿರುವವರನ್ನು ಗೆಲ್ಲಿಸಬೇಕು. ನಮ್ಮನ್ನು ಕೊನೆ ಫಲಾನುಭವಿಗಳನ್ನಾಗಿ ಮಾಡಿದ್ದಾರೆ. ಹೊಸದುರ್ಗ, ಮೊಳಕಾಲ್ಮುರು ಜನರು ಸಿಹಿ ಊಟಕ್ಕೆ ತಯಾರು ಆಗಿದ್ದಾರೆ. ಆದರೆ ಇಲ್ಲಿ ಟೆಂಡರ್ ಕರೆದಿದ್ದೇವೆ ಅನ್ನುವ ಸಬೂಬು ಹೇಳುತ್ತಿದ್ದಾರೆ. ಎಂಜಿನಿಯರ್‌ಗಳು ಹಣದ ಕೊರತೆ ಎನ್ನುತ್ತಾರೆ. ಗುತ್ತಿಗೆದಾರರು ಹಣಬಾಕಿ ಇದೆ ಎನ್ನುತ್ತಾರೆ. ಐಮಂಗಲ ಹೋಬಳಿಯ ತೋಟಗಳನ್ನು ನೋಡಿದರೆ ಹೊಟ್ಟೆ ಉರಿಯುತ್ತಿದೆ. 1200 ಅಡಿ ಬೋರ್ ವೆಲ್ ಕೊರೆಸಿದರು ನೀರಿಲ್ಲ.ಫೆಬ್ರವರಿ ಮಾರ್ಚ್ ಗೆ ನೀರು ಬಿಡುವ ಭರವಸೆ ನಿಡುತ್ತೀರಿ.ಆದರೆ ಅದು ಈಡೇರುವ ನಂಬಿಕೆ ಇಲ್ಲ.ಮೊದಲು ಬಜೆಟ್ ನಲ್ಲಿ ಹಣವಿಟ್ಟು ಕೆಲಸ ಶುರು ಮಾಡಿ ಎಂದರು.

ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಮಾತನಾಡಿ, ನಮ್ಮದು ರೈತರ ಹೋರಾಟಕ್ಕೆ ಬೆಂಬಲ ಕೊಡುವ ಪಕ್ಷ. ರೈತ ಇಲ್ಲದಿದ್ದರೆ ದೇಶ ಉಳಿಯಲ್ಲ. ಇನ್ನೂ 3 ಟಿಎಂಸಿ ನೀರು ಕೊಟ್ಟರೆ ತಾಲೂಕು ಸಮೃದ್ಧವಾಗುತ್ತದೆ. ಬೇರೆ ತಾಲೂಕುಗಳು ಸಾಕಷ್ಟು ಅಭಿವೃದ್ಧಿ ಆಗಿವೆ. ಈ ಕ್ಷೇತ್ರವೂ ಅಭಿವೃದ್ಧಿ ಆಗಬೇಕು. ನೀರಾವರಿ ಪ್ರದೇಶವಾಗಬೇಕು. ಏತ ನೀರಾವರಿ ದೊಡ್ಡ ಕೆಲಸವಲ್ಲ. ಸಾವಿರಾರು ಕಿಮೀ ದೂರ ನೀರು ತೆಗೆದುಕೊಂಡು ಹೋದ ಉದಾಹರಣೆಗಳಿವೆ. ಮೊದಲು ಆಳುವವರು ಇಚ್ಚಾ ಶಕ್ತಿ ಪ್ರದರ್ಶಿಸಲಿ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ,ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಆಲೂರು ಸಿದ್ದರಾಮಣ್ಣ,ಕೆ.ಟಿ ರುದ್ರಮನಿ ಸೇರಿದಂತೆ ನೂರಾರು ರೈತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ
ಮಹನೀಯರ ಜಯಂತಿಗೆ ದೇಣಿಗೆ ನೀಡುವೆ ಎಂದು ಶಿವಲಿಂಗೇಗೌಡ