ಸಾಣೇಹಳ್ಳಿ ಭಾಗದ ಕೆರೆಗಳತ್ತ ಮುಖ ಮಾಡಿದ ಭದ್ರೆ

KannadaprabhaNewsNetwork |  
Published : Sep 11, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಸಾಣೇಹಳ್ಳಿ ಕೆರೆಗೆ ಭದ್ರೆ ನೀರು ಹರಿಸುವ ಕಾರ್ಯಕ್ಕೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಗೋವಿಂದಪ್ಪ ಇದ್ದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಸೇರಿದಂತೆ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಗ್ರಾಮದ ಬಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗುರುವಾರ ಗೇಟ್ (ರೆಗ್ಯುಲೇಟರ್) ಓಪನ್ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ನಿರಂತರ ಪ್ರಯತ್ನ ಹಾಗೂ ಹೋರಾಟಕ್ಕೆ ಇವತ್ತು ಸ್ವಲ್ಪ ಮಟ್ಟಿಗೆ ಫಲ ಸಿಕ್ಕಂತಾಗಿದೆ. ಈ ನೀರಾವರಿ ಯೋಜನೆಯು ಕೇವಲ ಹೊಸದುರ್ಗ ತಾಲೂಕಿಗೆ ಮಾತ್ರ ಸೀಮಿತವಾದದ್ದಲ್ಲ, ಶಾಸಕರು ಹೇಳಿದಂತೆ ಇದು ಒಕ್ಕೂಟ ವ್ಯವಸ್ಥೆಗೆ ಒಳಪಟ್ಟದ್ದು. ನಮ್ಮ ನಾಲ್ಕು ಜಿಲ್ಲೆಗಳಿಗೂ ಸೇರಿದ ನೀರಾಗಿದೆ. ''''''''ನನಗೆ ಬೇಕು, ನಿನಗೆ ಬೇಡ'''''''' ಎಂದು ಹಠ ಮಾಡುವುದಕ್ಕಿಂತ, ಎಲ್ಲರೂ ಹಂಚಿಕೊಂಡು ಊಟ ಮಾಡುವ ಉದಾರ ಸಂಸ್ಕೃತಿ ಶ್ರೇಷ್ಠವಾದದ್ದು. ಜೀವಜಲವಾದ ಈ ನೀರಿನ ಪವಿತ್ರತೆಯನ್ನು ಉಳಿಸಲು ಚಾನೆಲ್ ದಂಡೆಯಲ್ಲಿರುವ ಯಾವ ಹಳ್ಳಿಯ ಜನರೂ ಕಸವನ್ನು ಕಾಲುವೆಗೆ ಚೆಲ್ಲಬಾರದು.

ಬರಗಾಲ ಬರೀ ಹೊಸದುರ್ಗಕ್ಕೆ ಬಂದಿಲ್ಲ. ಚಳ್ಳಕೆರೆ, ತುಮಕೂರು, ಕಡೂರು ಭಾಗದಲ್ಲೂ ಇದೇ ಪರಿಸ್ಥಿತಿ ಇದೆ. ಈ ವರ್ಷ ತುಂಬಾ ಕಷ್ಟದ ದಿನಗಳಿರುವುದರಿಂದ ಲಭ್ಯವಿರುವ ನೀರನ್ನು ಅತ್ಯಂತ ಮಿತವಾಗಿ ಹಾಗೂ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು.ಪ್ರತಿಯೊಬ್ಬರಲ್ಲೂ ತಾಳ್ಮೆ ಇರಬೇಕು. ರೈತರು ಭೂಮಿ ಕಳೆದುಕೊಂಡಿದ್ದಾರೆ, ಅವರಿಗೆ ನೀರು ಸಿಗದಿದ್ದರೆ ವೇದನೆಯಾಗುತ್ತದೆ. ತಾಲೂಕಿನ ಎಲ್ಲಾ ಕೆರೆಗಳಿಗೂ ಕ್ರಮೇಣ ನೀರು ಬಿಡುವ ವ್ಯವಸ್ಥೆಯನ್ನು ಶಾಸಕರು ಮತ್ತು ಅಧಿಕಾರಿಗಳು ಮಾಡಬೇಕು. ರೈತನಿಗೆ ನೀರು, ಭೂಮಿ, ವಿದ್ಯುತ್ ಸರಿಯಾಗಿದ್ದರೆ ಸರ್ಕಾರಕ್ಕೆ ಸಾಲ ಕೊಡುವಷ್ಟು ಶಕ್ತನಾಗುತ್ತಾನೆ. ರೈತ ಬದುಕಿದರೆ ನಾವೆಲ್ಲರೂ ಬದುಕುತ್ತೇವೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಾಕ್ ವೆಲ್ ಗೇಟ್ ತೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಜಿ. ಗೋವಿಂದಪ್ಪ, ಜನರ ಹಾಗೂ ರೈತರ ಕಷ್ಟಕ್ಕೆ ಸ್ಪಂದಿಸಿ, ನಮ್ಮೆಲ್ಲರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು 3 ಟಿಎಂಸಿ ನೀರು ಹರಿಸಲು ಅನುಮತಿ ನೀಡಿದ್ದಾರೆ. ಚಿತ್ರದುರ್ಗದ ಗೋನೂರು ತಲುಪಿದ ತಕ್ಷಣವೇ ಹೊಸದುರ್ಗ ಭಾಗದ ನಾಲೆ ಹಾಗೂ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಒಕ್ಕೂಟ ವ್ಯವಸ್ಥೆಯ ಕಾನೂನು ಚೌಕಟ್ಟಿನಲ್ಲಿ ಪ್ರತಿಯೊಂದು ಕೆರೆಗೂ ನೀರು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ನಾವು ಮಾಡುತ್ತೇವೆ. ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ನೀರಾವರಿ ಇಲಾಖೆಯ ಅಧಿಕಾರಿ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸದುರ್ಗ ತಾಲೂಕಿನಲ್ಲಿ ಒಟ್ಟು 32 ಕೆರೆಗಳನ್ನು ತುಂಬಿಸುವ ಯೋಜನೆಯಿದು. ಇವತ್ತು ಸಾಣೇಹಳ್ಳಿಯ ‘1ಸಿ’ ರೆಗ್ಯುಲೇಟರ್ ಎತ್ತುವುದರ ಮೂಲಕ ಪ್ರಥಮ ಹಂತದಲ್ಲಿ 19 ಕೆರೆಗಳಿಗೆ ನೀರು ಹರಿಯಲು ಚಾಲನೆ ನೀಡಲಾಗಿದೆ. ಮುಂದಿನ ಹಂತದಲ್ಲಿ ಮಾಡದಕೆರೆ ಹೋಬಳಿಯ ಜಾನಕಲ್್, ಹೊಸದುರ್ಗ, ದೇವಪುರ ಸೇರಿದಂತೆ ಉಳಿದ ಕೆರೆಗಳಿಗೂ ನೀರು ಹರಿಸಲಾಗುತ್ತದೆ ಎಂದು ಯೋಜನೆಯ ತಾಂತ್ರಿಕ ವಿವರ ನೀಡಿದರು. ಎಇಇ ಸುರೇಶ್, ಪ್ರಕಾಶ್, ಸ್ಥಳೀಯ ಮುಖಂಡರು ಹಾಗೂ ಸಾಣೇಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಚ್ಚಪ್ಪ ಜಮಾದಾರ ನಿಂದನೆ ಖಂಡಿಸಿ ಪ್ರತಿಭಟನೆ
ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ: ಸಂಸದ ರಾಧಾಕೃಷ್ಣ ದೊಡ್ಡಮನಿ