ಭದ್ರಾವತಿ: ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವಂತೆ ಆಗ್ರಹಿಸಿ ಹಾಗೂ ಗ್ರಾಮಸಭೆ ನಿರ್ಲಕ್ಷ್ಯ ಮತ್ತು ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಬುಧವಾರ ಅಂಬೇಡ್ಕರ್ ಭವನ ಮುಂಭಾಗ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಈ ವೇಳೆ ಧರಣಿಯ ನೇತೃತ್ವ ವಹಿಸಿದ್ದ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಮಾತನಾಡಿ, ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ನಗರದ ಹೃದಯ ಭಾಗವಾದ ಕನಕಮಂಟಪ ಮೈದಾನದ ಬಳಿ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಪಕ್ಕದ ಖಾಲಿ ಜಾಗದಲ್ಲಿ ೨೦೧೮ರಲ್ಲಿ ಶಂಕುಸ್ಥಾಪನೆಗೊಂಡು ಇದೀಗ ಪೂರ್ಣ ಪ್ರಮಾಣಕ್ಕೆ ತಲುಪಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸುವ ಮೂಲಕ ಅಂಬೇಡ್ಕರ್‌ರವರನ್ನು ಗೌರವಿಸಬೇಕೆಂದು ಒತ್ತಾಯಿಸಿದರು.ತಾಲೂಕಿನ ಎಲ್ಲಾ ೩೩ ಗ್ರಾಮ ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಗ್ರಾಮಸಭೆಗಳನ್ನು ನಡೆಸುತ್ತಿಲ್ಲ. ಗ್ರಾಮಸಭೆಗಳ ಕುರಿತು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಯೋಜನೆಗಳು ಬಡವರ್ಗದವರಿಗೆ ತಲುಪದೆ ಶ್ರೀಮಂತರ ಪಾಲಾಗುತ್ತಿವೆ. ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ಸರಿಯಾಗಿ ಕಲ್ಪಿಸಿಕೊಡದೆ ನಿರ್ಲಕ್ಷ್ಯವಹಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಹ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಲ್ಲದೆ ಭ್ರಷ್ಟಾಚಾರ ಸಹ ಕಂಡು ಬರುತ್ತಿದ್ದು, ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.ತಕ್ಷಣ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಗ್ರಾಮಸಭೆಗಳನ್ನು ನಡೆಸುವ ಮೂಲಕ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಐ.ಎಲ್.ಅರುಣ್‌ಕುಮಾರ್, ಎಂ.ಎನ್.ಚಂದ್ರಶೇಖರ್, ಎಲ್.ಸಂಗಮ್ಮ, ರತ್ನಮ್ಮ, ವರಲಕ್ಷ್ಮಿ, ಲಕ್ಷ್ಮಮ್ಮ, ಸರೋಜ, ಶಾರದಮ್ಮ, ಗಂಗಮ್ಮ, ಜಯಮ್ಮ, ನಾಗರತ್ನಮ್ಮ, ನವೀನ್, ಶ್ರೀನಿವಾಸ್ ಇತರರಿದ್ದರು.