ಭದ್ರಾವತಿ ಕಾರ್ಖಾನೆ, ಎಚ್ ಎಂಟಿ ಕಾರ್ಖಾನೆ ಪುನಶ್ಚೇತನ ನನ್ನ ಗುರಿ: ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Jul 22, 2024, 01:20 AM IST
21ಕೆಎಂಎನ್ ಡಿ21 | Kannada Prabha

ಸಾರಾಂಶ

ಸಚಿವನಾಗಿ ಒಂದೂವರೆ ತಿಂಗಳಾಗಿದೆ. ಅಷ್ಟರಲ್ಲಿಯೇ ಕುಮಾರಸ್ವಾಮಿ ಕರ್ನಾಟಕಕ್ಕೆ ಏಕೆ ಬರುತ್ತಾನೆ. ಮಂಡ್ಯ ಜಿಲ್ಲೆಗೆ ಏಕೆ ಹೋಗುತ್ತಾನೆ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ರಾಜ್ಯಕ್ಕೆ ಏಕೆ ಬಂದ ಎಂದು ಕೇಳುವವರಿಗೆ ನನ್ನ ಜನರ ಕಷ್ಟಸುಖ ಕೇಳುವುದು ಬೇಡವೇ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದೇಶ ಹಾಗೂ ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಭದ್ರಾವತಿ ಉಕ್ಕಿನ ಕಾರ್ಖಾನೆ, ಎಚ್.ಎಂ.ಟಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಪ್ರಯತ್ನ ಆರಂಭಿಸಿದ್ದೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್ .ಡಿ.ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಟಿಬಿ ಬಡಾವಣೆಯ ಪುರಸಭಾ ಮೈದಾನದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯದ ಪ್ರತಿಷ್ಠಿತ ಭದ್ರಾವತಿ ಮತ್ತು ಉಕ್ಕಿನ ಕಾರ್ಖಾನೆ, ದೇಶದ ಅತ್ಯಂತ ಪ್ರತಿಷ್ಠಿತವಾಗಿದ್ದ ಎಚ್.ಎಂ.ಟಿ ಕಾರ್ಖಾನೆ ಸ್ಥಗಿತಗೊಂಡಿವೆ. ಇವುಗಳ ಪುನಶ್ಚೇತನ ನನ್ನ ಗುರಿಯಾಗಿದೆ ಎಂದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಿದ್ದೇವೆ ಎನ್ನುವವರಿಗೆ ಉತ್ತರ ಸಿಕ್ಕಿದೆ. ಜನರ ಆಶೀರ್ವಾದದಿಂದ ಜೆಡಿಎಸ್ ಪುನಶ್ಚೇತನವಾಗಿರುವುದು ಕಾಂಗ್ರೆಸ್ಸಿಗರಲ್ಲಿ ನಿದ್ದೆಗೆಡಿಸಿದೆ ಎಂದು ಕಿಡಿಕಾರಿದರು.

ನಾನು ಮಂಡ್ಯ ಜಿಲ್ಲೆಯಲ್ಲಿ ಜನತಾ ದರ್ಶನ ನಡೆಸಿದರೆ ಅದಕ್ಕೆ ಅಧಿಕಾರಿಗಳು ಹೋಗಬಾರದೆಂದು ಸೂಚಿಸುತ್ತಾರೆ. ಕೇಂದ್ರ ಸಚಿವರಿಗೆ ಜನತಾ ದರ್ಶನ ನಡೆಸಲು ಅಧಿಕಾರ ಇಲ್ಲ ಎನ್ನುತ್ತಾರೆ. ಕುಮಾರಣ್ಣ ಜನತಾ ದರ್ಶನ ಮಾಡಬಾರದು. ಅವರಿಗೆ ಯಾವುದೇ ಅಧಿಕಾರ ಇಲ್ಲ ಎನ್ನುವವರು ವಿಧಾನಸೌಧದ ಸರ್ವಪಕ್ಷಗಳ ಸಭೆಗೆ ನನ್ನನ್ನು ಏಕೆ ಕರೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಎಂ.ಕೃಷ್ಣ, ದೇವೇಗೌಡರು, ಸದಾನಂದಗೌಡರು, ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನನಗೂ ಒಂದು ಅವಕಾಶ ಕೊಡಿ, ನನ್ನ ಕೈಗೆ ಒಂದು ಬಾರಿ ಪೆನ್ನು, ಪೇಪರ್ ಕೊಡಿ ಎನ್ನುತ್ತಿದ್ದ ವ್ಯಕ್ತಿ ಇದುವರೆಗೂ ಗುಡ್ಡ ಕುಸಿದವರ ಕಡೆಗೆ ತಿರುಗಿ ನೋಡಿಲ್ಲ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಗುಡ್ಡಗಳು ಕುಸಿದು ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಆದರೆ, ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಸಚಿವನಾಗಿ ಒಂದೂವರೆ ತಿಂಗಳಾಗಿದೆ. ಅಷ್ಟರಲ್ಲಿಯೇ ಕುಮಾರಸ್ವಾಮಿ ಕರ್ನಾಟಕಕ್ಕೆ ಏಕೆ ಬರುತ್ತಾನೆ. ಮಂಡ್ಯ ಜಿಲ್ಲೆಗೆ ಏಕೆ ಹೋಗುತ್ತಾನೆ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ರಾಜ್ಯಕ್ಕೆ ಏಕೆ ಬಂದ ಎಂದು ಕೇಳುವವರಿಗೆ ನನ್ನ ಜನರ ಕಷ್ಟಸುಖ ಕೇಳುವುದು ಬೇಡವೇ ಎಂದು ಪ್ರಶ್ನಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು