ವಿಘ್ನೇಶ್ ಎಂ. ಭೂತನಕಾಡು
ಅತಿ ಹೆಚ್ಚು ಮಳೆ ಬಂದ ಸಂದರ್ಭ ದ್ವೀಪವಾಗಿ ಇಡೀ ಊರಿನ ಸಂಪರ್ಕ ಕಳೆದುಕೊಳ್ಳುವುದರೊಂದಿಗೆ ಗ್ರಾಮಸ್ಥರ ಓಡಾಡಕ್ಕೆ ತೊಂದರೆಯಾಗುತ್ತಿದ್ದ ಭಾಗಮಂಡಲದಲ್ಲಿ, ಈ ಬಾರಿಯ ಮಳೆಗಾಲಕ್ಕೆ ಜನರಿಗೆ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ.
ಭಾಗಮಂಡಲದಲ್ಲಿ ನಿರ್ಮಾಣವಾಗಿರುವ ಕೊಡಗಿನ ಏಕೈಕ ಮೇಲು ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.ಸುಮಾರು ಆರು ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯಗೊಳ್ಳುತ್ತಿದೆ. ಒಂದಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ವಾಹನಗಳ ಸಂಚಾರಕ್ಕೆ ಈಗಾಗಲೇ ಮೇಲು ಸೇತುವೆಯಲ್ಲಿ ಅವಕಾಶ ಮಾಡಲಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇಲು ಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.
2018ರಿಂದ ಈ ಭಾಗದಲ್ಲಿ ಪ್ರವಾಹ ಮತ್ತು ಭೂಕುಸಿತ ಸಾಮಾನ್ಯವಾಗಿದೆ. 2018ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಭಾಗಮಂಡಲದಲ್ಲಿ ಮೇಲ್ಸೇತುವೆ ಮಾಡುವುದಾಗಿ ಘೋಷಿಸಿದ್ದರು.
2019 ರಲ್ಲಿ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಸ್ಥಳದಲ್ಲಿ 5 ಜನರು ಭೂಸಮಾಧಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ಸ್ಥಳವನ್ನು ತಲುಪಬೇಕಾಗಿದ್ದ ರಕ್ಷಣಾ ಪಡೆಗಳು, ಸ್ಥಳೀಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
2018ರಲ್ಲಿ ಮೇಲ್ಸೇತುವೆ ಕಾಮಾಗಾರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ ಆರು ವರ್ಷವಾದರೂ ಪೂರ್ಣಗೊಂಡಿರಲಿಲ್ಲ. ಮಳೆಯಿಂದ ಕಾಮಗಾರಿಗೆ ತೊಂದರೆ, ಕೊರೋನಾ ಸಮಸ್ಯೆ, ಜಾಗದ ಸಮಸ್ಯೆ ಹಾಗೂ ಗುತ್ತಿಗೆದಾರರು ಕೆಲಸ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಕಾಮಗಾರಿ ನಡೆದಿದೆ. ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಮಳೆಗಾಲದ ಸಂದರ್ಭ ಭಾಗಮಂಡಲದಲ್ಲಿ ಪ್ರವಾಹ ಉಂಟಾಗಿ ಬೋಟ್ ಗಳ ಮೂಲಕ ಜನರನ್ನು ಸಾಗಿಸಲಾಗುತ್ತಿತ್ತು. ಇದಲ್ಲದೆ ಜೀವ ಕೈಯಲ್ಲಿಡಿದು ಪ್ರವಾಹ ನೀರಿನಲ್ಲೇ ಗ್ರಾಮಸ್ಥರು ನಡೆದಾಡುವ ಪರಿಸ್ಥಿತಿ ಎದುರಾಗಿತ್ತು.
ಭಾಗಮಂಡಲ ಪ್ರದೇಶ ದ್ವೀಪವಾದರೆ ಭಾಗಮಂಡಲ ಸೇರಿದಂತೆ ಐಯ್ಯಂಗೇರಿ, ಸಣ್ಣಪುಲಿಕೋಟು, ತಾವೂರು, ತಣ್ಣಿಮಾನಿ, ಚೇರಂಗಾಲ, ಕೋರಂಗಾಲ ಗ್ರಾಮದ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು. ಈ ಭಾಗದ ಮಕ್ಕಳಿಗೆ ಶಾಲೆಗೆ ತೆರಳಲು ಕೂಡ ಸಮಸ್ಯೆಯಾಗುತ್ತಿತ್ತು. .................ಭಾಗಮಂಡಲದಲ್ಲಿ ಇದೀಗ ಮೇಲು ಸೇತುವೆ ಸಂಚಾರಕ್ಕೆ ಮುಕ್ತಗೊಂಡಿದೆ. ಮಳೆಗಾಲದಲ್ಲಿ ಜೀವ ಕೈಯಲ್ಲಿಡಿದು ಹರಿವ ನದಿಯಲ್ಲೇ ನಡೆದಾಡುತ್ತಿದ್ದೆವು. ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿತ್ತು. ಇದೀಗ ಮೇಲು ಸೇತುವೆಯಿಂದಾಗಿ ಭಾಗಮಂಡಲ ಜನತೆ ಹಾಗೂ ಭಕ್ತರಿಗೆ ತುಂಬಾ ಅನುಕೂಲವಾಗಿದೆ.
.........
-ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ.