ಭಗತ್ ಸಿಂಗ್ ಆಲೋಚನೆಗಳು ಯುವಜನರಿಗೆ ಆದರ್ಶ

KannadaprabhaNewsNetwork |  
Published : Sep 29, 2024, 01:34 AM IST
ಚಿತ್ರದುರ್ಗ ನಾಲ್ಕನೇ ಪುಟದ ಲೀಡ್  | Kannada Prabha

ಸಾರಾಂಶ

ಧರ್ಮಗಳ ಗಡಿ ಮೀರಿ ಎಲ್ಲರೂ ಭಾರತವೆಂಬ ಒಂದೇ ಸೂರಿನಡಿಯಲ್ಲಿ ನೆಮ್ಮದಿಯಿಂದ ಬದುಕುವಂತಾಗಬೇಕು, ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ರಾಜಿರಹಿತ ಹೋರಾಟ ನಡೆಸಿ, ನಗುನಗುತ್ತಾ ಭಗತ್ ಸಿಂಗ್ ಗಲ್ಲು ಗಂಬವನೇರಿದ್ದರು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ ಆಲೋಚನೆಗಳು ಇಂದಿನ ಯುವಕರಿಗೆ ಆದರ್ಶವಾಗಬೇಕೆಂದು ಎಐಟಿಯುಸಿ ಮುಖಂಡ ರವಿಕುಮಾರ್ ಹೇಳಿದರು.

ಎಐಡಿಎಸ್‍ಓ-ಎಐಡಿವೈಓ ವತಿಯಿಂದ ಶನಿವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್‍ರ 117ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಧೀರ ಹುತಾತ್ಮ ಭಗತ್ ಸಿಂಗ್‍ರವರ ವಿಚಾರಧಾರೆಗಳು ಇಂದಿಗೂ ನಮ್ಮ ಸಮಾಜ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಭಗತ್ ಸಿಂಗ್‍ರವರ ಇಂಕ್ವಿಲಾಬ್ ಜಿಂದಾಬಾದ್ ಅಂದರೆ ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆ ಇಂದಿಗೂ ಸಹ ಆಳ್ವಿಕರ ಎಲ್ಲ ಶೋಷಣೆ ವಿರುದ್ಧ ಯುವಕರ ಮನಸ್ಸನ್ನು ಎಚ್ಚರಿಸುತ್ತವೆ. ದೇಶದ ಎಲ್ಲಾ ಸಂಪತ್ತಿನ ಒಡೆತನವನ್ನು ಬಂಡವಾಳಿಗರು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಇದೇ ನಮ್ಮ ದೇಶದ ಬಡ ರೈತರ, ಕಾರ್ಮಿಕರ, ನವ ಯುವಕರ ಬೆಳವಣಿಗೆಗೆ ದೊಡ್ಡ ತೊಡಕಾಗಿದೆ ಎಂಬುದನ್ನು ಭಗತ್‍ಸಿಂಗ್ ಸ್ಪಷ್ಟವಾಗಿ ಗ್ರಹಿಸಿದ್ದರು. ಅದಕ್ಕಾಗಿ ಮಾನವನಿಂದ ಮಾನವನ ಮೇಲೆ ಜರುಗುವ ಶೋಷಣೆ ತೊಲಗಿಸಿ ನೊಂದ ಜನ ಗೌರವದಿಂದ ತಲೆಯೆತ್ತಿ ಜೀವಿಸುವ ಸಮಾಜವಾದಿ ಸಮಾಜವ ಗುರಿ ಹೊಂದಿದ್ದರು. ಆದರೆ ಅವರ ಕನಸು ಇಂದಿಗೂ ನನಸಾಗಿಲ್ಲವೆಂದರು.

ಸ್ವಾತಂತ್ರ್ಯ ನಂತರ ಆಳ್ವಿಕೆಗೆ ಬಂದ ಎಲ್ಲ ಸರ್ಕಾರಗಳು ಅವರ ವಿಚಾರಧಾರೆ ಮೂಲೆಗುಂಪಾಗಿಸಿವೆ. ದೇಶ ಸ್ವತಂತ್ರವಾಗಿ ಏಳು ದಶಕಗಳು ಕಳೆದಿದ್ದರೂ ಬಡವರು ಶ್ರೀಮಂತರ ಮಧ್ಯ ಅಂತರ ಕಡಿಮೆಯಾಗಿಲ್ಲ. ರೈತ ಕಾರ್ಮಿಕರ ಬದುಕು ಇನ್ನು ಅತಂತ್ರವಾಗಿಯೇ ಉಳಿದಿದೆ. ಉದ್ಯೋಗ, ಆರೋಗ್ಯ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ ಗಂಭೀರವಾದ ಕೊರತೆ ಎದುರಿಸುತ್ತಿದ್ದೇವೆ. ಭಾರತ ಅಪಾರವಾದ ನೈಸರ್ಗಿಕ ಸಂಪತ್ತನ್ನು ಹೊಂದಿದ್ದರು ಸರ್ಕಾರಗಳು ಮೂಲಸೌಕರ್ಯಗಳನ್ನು ಕೊಡುವಲ್ಲಿ ವಿಫಲವಾಗಿ ಕೇವಲ ನೆಪ ನೀಡುತ್ತಿವೆ. ಬ್ರಿಟಿಷರ ನಂತರ ಬಂದ ಎಲ್ಲಾ ಆಳ್ವಿಕರು ಈ ಬಂಡವಾಳಿಗರ ಸೇವೆಗೆ ಬದ್ಧರಾಗಿ ನಿಂತಿದ್ದಾರೆ ಎಂದು ದೂರಿದರು.

ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು, ಅವನ ವಿಚಾರಗಳನ್ನಲ್ಲ ಎಂಬ ಭಗತ್ ಸಿಂಗ್ ವಿಚಾರಧಾರೆ ಸಂಪೂರ್ಣವಾಗಿ ಮುಚ್ಚಿಡಲು ಸಾಧ್ಯವಿಲ್ಲ. ನಮ್ಮ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ದೇಶದಾದ್ಯಂತ ಭಗತ್ ಸಿಂಗ್‍ರ ಜನ್ಮದಿನವನ್ನು ಅತ್ಯಂತ ಗೌರವದಿಂದ ಆಚರಿಸಿ ಯುವಜನರಿಗೆ ಅವರ ವಿಚಾರಧಾರೆಯನ್ನ ತಲುಪಿಸುವ ಪ್ರಯತ್ನ ಮಾಡಬೇಕು ಎಂದರು.

ಎಐಡಿಎಸ್‍ಓ ಜಿಲ್ಲಾ ಮುಖಂಡ ಕೆ.ಈರಣ್ಣ ಮಾತನಾಡಿ ಜಾತಿ, ಧರ್ಮಗಳ ಗಡಿ ಮೀರಿ ಎಲ್ಲರೂ ಭಾರತವೆಂಬ ಒಂದೇ ಸೂರಿನಡಿಯಲ್ಲಿ ನೆಮ್ಮದಿಯಿಂದ ಬದುಕುವಂತಾಗಬೇಕು, ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ರಾಜಿರಹಿತ ಹೋರಾಟ ನಡೆಸಿ, ನಗುನಗುತ್ತಾ ಭಗತ್ ಸಿಂಗ್ ಗಲ್ಲು ಗಂಬವನೇರಿದ್ದರು ಎಂದರು.

ಸಮಾಜದಲ್ಲಿ ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ, ಜಾತಿ ಹಾಗೂ ಕೋಮುವಾದದ ವಿರುದ್ಧ ದ್ವನಿ ಎತ್ತಲು ಅವರ ವಿಚಾರಗಳು ನಮಗೆ ಸ್ಫೂರ್ತಿಯಾಗಿವೆ. ಭಗತ್ ಸಿಂಗ್‍ರ ಜೀವನ ಸಂಘರ್ಷ ಹಾಗೂ ವಿಚಾರಗಳನ್ನು ಸ್ಫೂರ್ತಿಯಾಗಿಸಿಕೊಂಡು ಅವರ ಕನಸಿನ ಸಮಾಜವಾದಿ ಭಾರತ ಕಟ್ಟಲು ವಿದ್ಯಾರ್ಥಿಗಳು ಸಂಕಲ್ಪ ತೊಡಬೇಕು.ಶಿಕ್ಷಣ, ಸಂಸ್ಕೃತಿ, ಮಾನವತೆ ಉಳಿಸಲು ವಿದ್ಯಾರ್ಥಿ-ಯುವಜನತೆ ಒಂದಾಗಬೇಕು ಎಂದು ಕರೆ ನೀಡಿದರು.

ಎಐಡಿಎಸ್‍ಓ ಸದಸ್ಯರಾದ ಹೇಮಂತ್, ಪವನ್, ನಿಶಾನ್, ಎಐಡಿವೈಓನ ನಿಂಗರಾಜ್, ಎಐಎಂಎಸ್‍ಎಸ್ ಮಹಿಳಾ ಸಂಘಟನೆ ಸುಜಾತ ಮತ್ತು ನಗರಸಭೆಯ ನೌಕರರಾದ ಶಿವು ಮತ್ತು ಕೃಷ್ಣ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ
ಅತ್ತೂರು: ಶತ ಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮ