ಭಗವದ್ಗೀತೆ ಅಭಿಯಾನ ದೇಶಾದ್ಯಂತ ನಡೆಯಬೇಕಿದೆ: ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರಲೇಕರ್

KannadaprabhaNewsNetwork |  
Published : Dec 01, 2025, 01:30 AM IST
ಪೊಟೋ: 30ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಭಾಗವದ್ಗೀತ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು. | Kannada Prabha

ಸಾರಾಂಶ

5000 ವರ್ಷಗಳ ಹಿಂದೆ ಮಾನವ ಜೀವನ ನಿರ್ಮಾಣಕ್ಕಾಗಿ ಗೀತೆಯನ್ನು ಬೋಧಿಸಲಾಯಿತು. ಇಂದಿಗೂ ಇದು ಪ್ರಸ್ತುತವಾಗಿದೆ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರಲೇಕರ್ ಅಭಿಪ್ರಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

5000 ವರ್ಷಗಳ ಹಿಂದೆ ಮಾನವ ಜೀವನ ನಿರ್ಮಾಣಕ್ಕಾಗಿ ಗೀತೆಯನ್ನು ಬೋಧಿಸಲಾಯಿತು. ಇಂದಿಗೂ ಇದು ಪ್ರಸ್ತುತವಾಗಿದೆ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರಲೇಕರ್ ಅಭಿಪ್ರಾಯಿಸಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಗವದ್ಗೀತೆ ಅಭಿಯಾನ ನಡೆಯುತ್ತಿರುವುದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿ. ಇದು ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ನಡೆಯಬೇಕಿದೆ ಎಂದರು.

ಸಮಾಜದಲ್ಲಿ ತಪ್ಪುಗಳು ಹೆಚ್ಚುತ್ತಾ ಹೋದಾಗ ಭಗವಂತ ಸಾಧು ಸಂತರ ರೂಪದಲ್ಲಿ ಮಾರ್ಗದರ್ಶನ ಮಾಡುತ್ತಾ ಹೋಗುತ್ತಾರೆ. ಈಗಲೂ ಗೀತೆಯಲ್ಲಿ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಇದೆ. ಮಾನವ ಜೀವನ ಕಲ್ಯಾಣಕ್ಕೆ ಇದರ ಅಗತ್ಯವೂ ಇದೆ. ಇದರಿಂದ ಏನಾದರೊಂದು ಮಾರ್ಗದರ್ಶನ ಸಿಗುತ್ತದೆ. ಸಮಾಜದಲ್ಲಿ ಧರ್ಮ ಹಿಂದೆ ಸರಿದಾಗ ಭಗವಂತನ ದರ್ಶನ ಆಗುತ್ತದೆ. ಅದು ಶಂಕರಾಚಾರ್ಯ, ಬಸವೇಶ್ವರ, ಸಾಧು ಸಂತರ ರೂಪದಲ್ಲಿ ಆಗಬಹುದು ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ವರ್ಣವಲ್ಲಿಪ್ರಭಾ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಒಂದು ರೀತಿಯ ಅಜಾಗರೂಕತೆ ವಾತಾವರಣ ಕಾಣುತ್ತಿದ್ದೇವೆ. ಹಲವಾರು ಕಡೆಗಳಲ್ಲಿ ಹಿಂಸೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಪ್ರತಿ ಶಾಲೆಯಲ್ಲಿಯೂ ಭಗವದ್ಗೀತೆ ಅಧ್ಯಯನ ನಡೆಯಬೇಕು ಎಂದರು. ಹಿಂದೆ ಶಾಲಾ ಪಠ್ಯಗಳಲ್ಲಿ ರಾಮಾಯಣ, ಮಹಾಭಾರತದ ಪಠ್ಯಗಳು ಇರುತ್ತಿದ್ದವು. ಈಗ ಅದೆಲ್ಲಾ ಮರೆತೇಹೋದ ಸ್ಥಿತಿ ಇದೆ. ಸಮಾಜ ಆಧುನಿಕತೆ ವೇಗದಲ್ಲಿ ಸಾಗುತ್ತಿದೆ. ಅದಕ್ಕೆ ನಿಯಂತ್ರಣ ಬೇಕಾಗಿದೆ ಎಂದರು.

ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಅಭಿಯಾನ ನಾಲ್ಕು ಉದ್ದೇಶ ಹೊಂದಿದೆ. ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಾಮರಸ್ಯ, ನೈತಿಕತೆ ಪುನಃರುತ್ಥಾನ ಹಾಗೂ ರಾಷ್ಟ್ರೀಯ ಭಾವೈಕ್ಯ ಮೂಡಿಸುವುದೇ ಇದರ ಉದ್ದೇಶ. ಸಮಾಜದಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದೆ ಅಂತಹವರಿಗೆ ವ್ಯಕ್ತಿತ್ವ ವಿಕಸನ ಅಗತ್ಯವಿದೆ ಅದು ಗೀತೆ ಪಠಣದಿಂದ ಸಾಧ್ಯ ಎಂದರು.

ಸಮಾಜದಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿದೆ, ಶಿಕ್ಷಣ ಪಡೆದವರೇ, ಡಾಕ್ಟರ್ ಆದವರೂ ಇದರಲ್ಲಿ ಸಿಲುಕಿದ್ದಾರೆ. ಯಾವುದೋ ಸಂಸ್ಕಾರದ ಕೊರತೆ ಇದಕ್ಕೆ ಕಾರಣ. ಗೀತಾ ಪಠಣ ಈ ಸಮಸ್ಯೆಗೆ ಪರಿಹಾರ ಎಂದರು.

ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಪರಿಷತ್ ಸದಸ್ಯ ಬೋಜೇಗೌಡ, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ ಭಟ್, ಡಿ.ಎಸ್.ಅರುಣ್, ಕೆ.ಈ.ಕಾಂತೇಶ್ ಇನ್ನಿತರರು ಇದ್ದರು.

-----

ದೇಶದಲ್ಲಿ ಅಲ್ಪ ಸ್ವಲ್ಪ ಸನಾತನ ಹಿಂದು ಧರ್ಮ ಉಳಿದಿದ್ದರೆ ಅದಕ್ಕೆ ಪೂಜ್ಯರುಗಳೇ ಕಾರಣರು. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೇ 10 ಶ್ಲೋಕಗಳನ್ನು ಪಠಣ ಮಾಡಿದ್ದಾರೆ. ಅವರು ದೇಶ ಮುನ್ನಡೆಸಲು ಮಾತ್ರವಲ್ಲ, ಧರ್ಮದ ಉಳಿವಿನ ಬದ್ಧತೆಯನ್ನೂ ಹೊಂದಿದ್ದಾರೆ. -ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.

------

ಅರ್ಜುನ ಗೊಂದಲದಲ್ಲಿ ಸಿಲುಕಿದ್ದಾಗ ಶ್ರೀಕೃಷ್ಣ ಗೀತೆಯನ್ನು ಬೋಧಿಸುವ ಮೂಲಕ ಪರಿಹಾರಗಳನ್ನು ಸೂಚಿಸಿದ್ದಾರೆ. ಗೀತೆ ಸನಾತನ ಹಿಂದುಗಳು ಪವಿತ್ರ ಗ್ರಂಥ. ಅನೇಕ ಸಾಧಕರು, ಸಾಧು ಸಂತರು, ಚಿಂತಕರು ಗೀತೆಯ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಸಮಸ್ಯೆಗೆ ಪರಿಹಾರ ಕಾಣದೇ ಇದ್ದಾಗ, ನಿರಾಸೆ ಕಾಡಿದಾಗ ಗೀತೆ ಸಾಂತ್ವನವನ್ನು ಹೇಳುತ್ತದೆ.

-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ.

-----

ಆರೋಗ್ಯಯುತ ಸಮಾಜ ನಿರ್ಮಾಣವೇ ಗೀತೆಯ ಗುರಿ. ಈ ಭೌತಿಕ ದೇಹದಲ್ಲಿ ಆತ್ಮ ರೂಪದಲ್ಲಿ ಪರಮಾತ್ಮ ಇದ್ದಾನೆ. ಹುಟ್ಟು ಸಾವಿನ ನಡುವೆ ಆತ್ಮ ಭಗವಂತನ ಕಡೆ ಸಾಗಲು ಧರ್ಮ ಮಾರ್ಗದಲ್ಲಿ ನಡೆಯಬೇಕು. ಅದಕ್ಕೆ ಸಾಧನವೇ ಭಗವದ್ಗೀತೆ.

-ಶ್ರೀ ನಾದಮಯನಂದನಾಥ ಸ್ವಾಮೀಜಿ

-----

ಈ ದೇಹ ನಶ್ವರ ಆಗಿದ್ದರೂ ಶಾಶ್ವತವಾಗಿ ಉಳಿಯುವ ಭ್ರಮೆಯಲ್ಲಿ ಅನಾಹುತ, ಅಪಸವ್ಯಗಳನ್ನು ಮಾಡುತ್ತಿದ್ದೇವೆ. ಭ್ರಮೆಯ ಕೋಟೆ ಕಟ್ಟಿಕೊಂಡಿದ್ದೇವೆ. ಹಿಂದೆ ಕೌರವ-ಪಾಂಡವರ ನಡುವೆ ಯುದ್ಧ ನಡೆಯುತ್ತಿತ್ತು. ಆದರೆ ಈಗ ಮನುಷ್ಯನ ಒಳಗೇ ಯುದ್ಧ ನಡೆಯುತ್ತಿದೆ. ಯುದ್ಧವನ್ನು ನಮ್ಮ ಮೇಲೆ ನಾವೇ ಮಾಡಿಕೊಂಡು ಜಯ ಸಾಧಿಸಲು ಭಗವದ್ಗೀತೆ ದಾರಿದೀಪವಾಗಿದೆ.

-ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

------

ಬಹುತ್ವ ಸಂಸ್ಕೃತಿಯನ್ನು ಒಪ್ಪಿಕೊಂಡಿರುವ ವಿಶ್ವದ ಏಕಮಾತ್ರ ದೇಶ ನಮ್ಮದು. ಶ್ರೀಕೃಷ್ಣ ಸತ್ಯ ಒಂದೇ, ಮಾರ್ಗ ಹಲವು ಎಂದು ಹೇಳಿದ್ದಾರೆ. ಆದರೆ ವಿದೇಶಿಯರು ಸತ್ಯ ಒಂದೇ, ಮಾರ್ಗವೂ ಒಂದೇ, ನಾನೇ ಸತ್ಯ ಎಂದು ಹೇಳುತ್ತಾರೆ. ಯಾರು ಯಾವ ಉಪಾಸನಾ ಮಾರ್ಗದಲ್ಲಿ ಶ್ರದ್ಧೆ ಹೊಂದಿರುತ್ತಾರೋ, ಅದೇ ಮಾರ್ಗದಲ್ಲಿ ಅನುಗ್ರಹ ಮಾಡುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದಾರೆ. ಸಮನ್ವಯ ಸೂತ್ರಕಾರನೇ ಶ್ರೀಕೃಷ್ಣ.

-ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ : ಡಿಕೆ ಸಿಡಿಮಿಡಿ ! - ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ ?
ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌