ಹೊಸಪೇಟೆ: ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಆಯೋಜಿಸಿರುವ 19ನೇ ಭಗವದ್ಗೀತಾ ಅಭಿಯಾನ ಹೊಸಪೇಟೆ ನಗರದ ಹೊಟೇಲ್ ಮಲ್ಲಿಗೆ ಸಭಾಂಗಣದಲ್ಲಿ ಅ. 31ರಂದು ಸಂಜೆ 4 ಗಂಟೆಗೆ ಚಾಲನೆ ದೊರೆಯಲಿದೆ ಎಂದು ಭಗವದ್ಗೀತಾ ಅಭಿಯಾನ ಸಮಿತಿಯ ವಿಜಯನಗರ ಜಿಲ್ಲಾಧ್ಯಕ್ಷ ಪಿ.ಡಿ.ಗೌತಮ್ ತಿಳಿಸಿದರು.
ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯ ಎಂಬ ನಾಲ್ಕು ಧ್ಯೇಯಗಳೊಂದಿಗೆ ಈ ಅಭಿಯಾನ ನಡೆಯುತ್ತಿದೆ. ಈ ವರ್ಷ 2ನೇ ಅಧ್ಯಾಯ ಸಾಂಖ್ಯಯೋಗ ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ‘ ಹೃದಯದ ದೌರ್ಬಲ್ಯ ತ್ಯಜಿಸಿ ಎದ್ದು ನಿಲ್ಲು ಎಂಬುದು ಈ ವರ್ಷದ ಘೋಷವಾಕ್ಯ.
ವಿಜಯನಗರದಲ್ಲಿ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮ ಅ.31ರಂದು ಶನಿವಾರ ಸಂಜೆ 4 ಗಂಟೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ ಎಂದರು.ಉದ್ಘಾಟನಾ ಸಮಾರಭದಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿ, ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಮಹಾಸ್ವಾಮಿ, ಹರಪನಹಳ್ಳಿಯ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಹೊಸಪೇಟೆಯ ಹಂಸಾಂಬಾಶ್ರಮದ ಪ್ರಮೋದಾಮಯಿ ಮಾತಾಜಿ ಸಾನ್ನಿಧ್ಯ ವಹಿಸುವರು ಎಂದರು.
ಭಗವದ್ಗೀತಾ ಅಭಿಯಾನದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ರಾಘವೇಂದ್ರ ಆಚಾರ್ ಮಾತನಾಡಿ, ನ.2 ರಿಂದ ನ.9ರವರೆಗೆ ಮೊದಲ ಹಂತ, ನ.12 ರಿಂದ ನ.19 ರವರೆಗೆ ಎರಡನೆಯ ಹಂತ, ನ.21 ರಿಂದ ನ.28 ರವರೆಗೆ ಮೂರನೇ ಹಂತ, ನ.30 ರಿಂದ ಡಿ.7 ರವರೆಗೆ ನಾಲ್ಕನೇ ಹಂತ, ಡಿ.9 ರಿಂದ ಡಿ.16 5ನೇ ಹಂತದ ಅಭ್ಯಾಸ ವರ್ಗಗಳು ನಡೆಯಲಿದ್ದು, ಮಹಾ ಸಮರ್ಪಣೆ ಡಿ.18 ಮತ್ತು ಡಿ.19 ರಂದು ರಾಜ್ಯಮಟ್ಟದ ಸಮರ್ಪಣಾ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.
ಅಭಿಯಾನದ ಕಾರ್ಯಾಧ್ಯಕ್ಷ ಅನಂತ ಜೋಶಿ, ಕೋಶಾಧ್ಯಕ್ಷ ಅಶೋಕ್ ಜಿರೆ, ಉಪಾಧ್ಯಕ್ಷ ರಮೇಶ್ ಗುಪ್ತಾ, ಕಾರ್ಯದರ್ಶಿ ಭೂಪಾಳ ಶ್ರೀಪಾದ್, ಪ್ರಧಾನ ಸಂಚಾಲಕ ಎಚ್.ಪಿ. ಕಲ್ಲಂಭಟ್, ಮಠದ ಸಮನ್ವಯಾಧಿಕಾರಿ ವೆಂಕಟರಮಣ ಹೆಗಡೆ, ತಾಲೂಕು ಸಮಿತಿಯ ಅಧ್ಯಕ್ಷ ಸಂದೀಪ್ ಸಿಂಗ್, ಕಾರ್ಯದರ್ಶಿ ಎನ್, ಎಸ್, ರೇವಣಸಿದ್ದಪ್ಪ ಹಾಗೂ ಪ್ರಭಾಸ್ ಭಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.