ರಾಣಿಬೆನ್ನೂರು: ಇಂದಿನ ಯುವಜನತೆಗೆ ಉತ್ತಮ ಸಂಸ್ಕಾರಗಳ ಅಗತ್ಯವಿದ್ದು, ನಮ್ಮ ಮಹಾಗ್ರಂಥವಾದ ಭಗವದ್ಗೀತೆಯಲ್ಲಿ ಎಲ್ಲ ಕಾಲಕ್ಕೂ, ಎಲ್ಲ ಜನಾಂಗಕ್ಕೂ ಅನ್ವಯವಾಗುವ ಜೀವನ ಮೌಲ್ಯಗಳು ಮತ್ತು ಸಂಸ್ಕೃತಿಯ ಸಾರ ಅಡಕವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ್ ಶಿರಹಟ್ಟಿ ಹೇಳಿದರು.
ತಂದೆ-ತಾಯಿಗಳು ಮಕ್ಕಳೊಂದಿಗೆ ಸಮಯ ಕಳೆಯುತ್ತಾ ಅವರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದರ ಅರಿವು ಮೂಡಿಸಿ ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕು. ಸಂಸ್ಕಾರವು ವ್ಯಕ್ತಿಯ ಬದುಕನ್ನು ರೂಪಿಸುವ ವೈಯಕ್ತಿಕ ಮೌಲ್ಯವಾಗಿದೆ ಎಂದರು.
ರಾಷ್ಟ್ರ ಸೇವಿಕಾ ಸಮಿತಿ ಧಾರವಾಡ ವಿಭಾಗದ ಕಾರ್ಯವಾಹಿಕೆ ಶಾಂತಾ ವೆರ್ಣೇಕರ್ ಮಾತನಾಡಿ, ಸಂಘಟನೆ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಸಂಸ್ಕಾರ. ಪ್ರತಿಯೊಬ್ಬರೂ ಸಮಾಜದ ಋಣವನ್ನು ತೀರಿಸುವ ಮನೋಭಾವ ಬೆಳೆಸಿಕೊಂಡು, ತಮ್ಮ ವೃತ್ತಿ ಯಾವುದೇ ಆಗಿರಲಿ ಕೇವಲ ಸಂಪಾದನೆಗಷ್ಟೇ ಸೀಮಿತವಾಗದೆ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಸ್ವರಕ್ಷಣಾ ಕೌಶಲಗಳನ್ನು ಬೆಳೆಸಿಕೊಂಡು ಸಂಘಟಿತರಾಗಬೇಕು ಎಂದರು.ಸಂಸ್ಕೃತ ಪ್ರಾಧ್ಯಾಪಕಿ ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಸಹ ಬೌದ್ಧಿಕ ಪ್ರಮುಖ ಡಾ. ಶ್ರೀದೇವಿ ಭಟ್ ಕುಮಟಾ ಮಾತನಾಡಿ, ಮನಸ್ಸನ್ನು ಶುದ್ಧಗೊಳಿಸುವ ಸಂಸ್ಕಾರ ಮುಖ್ಯ, ಕಾಯ, ವಾಚ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯಗತ್ಯ ಎಂದರು.
ಜಿಲ್ಲಾ ದೇವಾಂಗ ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು.