ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಸಂತಮೀರಾ ಶಾಲೆಯ ಮಾಧವ ಸಭಾಗೃಹದಲ್ಲಿ ಮಂಗಳವಾರ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಧರ್ಮಗ್ರಂಥವೆಂದು ಪರಿಚಯವಾಗಿದೆ. ಆದರೆ, ವಾಸ್ತವದಲ್ಲಿ ಅದು ಚಿತ್ತಸ್ವಾಸ್ಥ್ಯದ ಗ್ರಂಥವೂ ಆಗಿದೆ. ಪ್ರಾಚೀನ ಭಾರತದಲ್ಲಿ ಯೋಗ ಚಿತ್ತಸ್ವಾಸ್ಥ್ಯದ ಉಪಾಯವಾಗಿತ್ತು. ಯೋಗವನ್ನೇ ಭಗವದ್ಗೀತೆ ಹೇಳುತ್ತದೆ ಎಂದು ಅಭಿಪ್ರಾಯಪಟ್ಟರು.
ಭಗವದ್ಗೀತೆಯಲ್ಲಿ ಕರ್ಮ ಯೋಗ, ಜ್ಞಾನ ಯೋಗ, ಭಕ್ತಿಯೋಗ ಮತ್ತು ಧ್ಯಾನ ಯೋಗ ಅಡಕವಾಗಿದೆ. ಈ 4 ಯೋಗಗಳ ಮೂಲಕ ಭಗವದ್ಗೀತೆ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡುವ ಸಂಸ್ಕಾರ ಕೊಡುತ್ತದೆ ಎಂದರು.ದೇಶದೆಲ್ಲೆಡೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆಧ್ಯಾತ್ಮ ಶಕ್ತಿಯಿಲ್ಲದೇ ನೈತಿಕತೆ ಇಲ್ಲ, ಹಾಗಾಗಿ ಜನರಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ತುಂಬಿ ನೈತಿಕತೆ ಮೇಲೆತ್ತಬೇಕು. ಭಾಷೆ, ಧರ್ಮ, ಜಾತಿ, ಮತ, ಪಂಥಗಳಲ್ಲಿ ಒಡೆದು ಹೋಗುತ್ತಿರುವ ಸಮಾಜವನ್ನು ಒಗ್ಗೂಡಿಸಲು ಭಗವದ್ಗೀತೆ ಸಹಕಾರಿಯಾಗಿದೆ ಎಂದರು.
ಇಂದು ಯುರೋಪ್ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲಾಗುತ್ತಿದೆ. ಮುಂದೊಂದು ದಿನ ಭಗವದ್ಗೀತೆ ಕಲಿಸಲು ನಮಗೆ ವಿದೇಶದಿಂದ ಶಿಕ್ಷಕರು ಬರುವ ದುರಂತ ಎದುರಾಗಬಾರದು. ನಮ್ಮಲ್ಲೂ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಲು ಕ್ರಮವಾಗಬೇಕು ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ನಮ್ಮ ದೇಶದ ಇತಿಹಾಸ 5 ಸಾವಿರ ವರ್ಷಕ್ಕೂ ಹಿಂದಿನದು ಎಂದು ಭಾಷಣದಲ್ಲಿ ಹೇಳುತ್ತೇವೆ. ಆದರೆ, ಅದಕ್ಕೂ ಮೊದಲಿಂದಲೂ ಭಾರತದಲ್ಲಿ ಭವ್ಯ ಪರಂಪರೆ ಇತ್ತು. ದೇಶದ ಸಂಸ್ಕೃತಿ ಪರಂಪರೆಯನ್ನು ಇಡೀ ವಿಶ್ವವೇ ಮೆಚ್ಚಿದೆ. ಭಗವದ್ಗೀತೆ ದೇಶದ ಭವ್ಯ ಪರಂಪರೆ ಎತ್ತಿ ಹಿಡಿಯುವ ಮಹಾನ್ ಗ್ರಂಥವಾಗಿದೆ. ಹಾಗಾಗಿ ಭಗವದ್ಗೀತಾ ಅಭಿಯಾನ ದೇಶದ ಪರಂಪರೆಯ ಅಭಿಯಾನವಾಗಿದೆ ಎಂದರು.ಆರ್ಷ ವಿದ್ಯಾ ಕೇಂದ್ರದ ಶ್ರೀ ಚಿತ್ಪ್ರಕಾಶಾನಂದ ಸ್ವಾಮೀಜಿ ಮತ್ತು ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಗವದ್ಗೀತೆಯ 10ನೇ ಅಧ್ಯಾಯ ಪಠಣ ಮಾಡಲಾಯಿತು. ಸೋಂದಾ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಎನ್. ಹೆಗಡೆ, ಶಿಕ್ಷಣತಜ್ಞ ಗೋಪಾಲ ಜಿನಗೌಡ ಉಪಸ್ಥಿತರಿದ್ದರು. ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಸಂಚಾಲಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಕಾರ್ಯದರ್ಶಿ ಎಂ.ಕೆ.ಹೆಗಡೆ ಇತರರು ಇದ್ದರು.