ಭಗವದ್ಗೀತೆ-ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳಲಿ

KannadaprabhaNewsNetwork |  
Published : Dec 05, 2023, 01:30 AM IST
ಸ್ವರ್ಣವಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು | Kannada Prabha

ಸಾರಾಂಶ

ಭಗವದ್ಗೀತೆ ಮತ್ತು ಕಾನೂನಿಗೆ ಒಳಗಿನ ಹಾಗೂ ಹೊರಗಿನ ಸಂಬಂಧವೂ ಇದೆ. ಭಗವದ್ಗೀತೆ ಮತ್ತು ಕಾನೂನಿನ ಆಶಯ ಎರಡೂ ಒಂದೇ. ಪ್ರಾಚೀನ ಕಾಲದಲ್ಲಿ ಧರ್ಮಶಾಸ್ತ್ರ ಮತ್ತು ಕಾನೂನು ಒಂದೇ ಆಗಿತ್ತು. ಅನೇಕ ಕಾನೂನುಗಳು ಧರ್ಮದ ಮೂಲದಿಂದಲೇ ಬಂದಿವೆ.

ಶಿರಸಿ:ನೈತಿಕತೆ ಮತ್ತು ಕಾನೂನು ಎರಡೂ ಪರಸ್ಪರ ಹತ್ತಿರದ ಶಬ್ದಗಳು. ಆಧ್ಯಾತ್ಮಿಕತೆ ಇಲ್ಲದ ನ್ಯಾಯ ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿಶ್ರೀ ಹೇಳಿದರು.ಭಗವದ್ಗೀತೆ ಅಭಿಯಾನದ ಅಂಗವಾಗಿ ಬೆಳಗಾವಿಯ ನ್ಯಾಯಾಲಯದ ಸಂಕೀರ್ಣದ ಸಮುದಾಯ ಭವನದಲ್ಲಿ ಭಗವದ್ಗೀತೆ ಮತ್ತು ಕಾನೂನು ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.ಭಗವದ್ಗೀತೆ ಮತ್ತು ಕಾನೂನಿಗೆ ಒಳಗಿನ ಹಾಗೂ ಹೊರಗಿನ ಸಂಬಂಧವೂ ಇದೆ. ಭಗವದ್ಗೀತೆ ಮತ್ತು ಕಾನೂನಿನ ಆಶಯ ಎರಡೂ ಒಂದೇ. ಪ್ರಾಚೀನ ಕಾಲದಲ್ಲಿ ಧರ್ಮಶಾಸ್ತ್ರ ಮತ್ತು ಕಾನೂನು ಒಂದೇ ಆಗಿತ್ತು. ಅನೇಕ ಕಾನೂನುಗಳು ಧರ್ಮದ ಮೂಲದಿಂದಲೇ ಬಂದಿವೆ. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚಿಸುವಾಗ ಧರ್ಮ ಶಾಸ್ತ್ರವನ್ನು ಸಹ ಚರ್ಚೆಗೊಳಪಡಿಸಲಾಗಿತ್ತು. ಅದರಲ್ಲಿಯ ಹಲವು ಅಂಶ ಸಹ ಸಂವಿಧಾನಕ್ಕೆ ತೆಗೆದುಕೊಳ್ಳಲಾಗಿದೆ. ಧ್ಯಾನದ ಮೂಲಕ ಸಮಚಿತ್ತತೆ ಸಾಧಿಸಿಕೊಂಡು ನ್ಯಾಯ ಪೀಠದಲ್ಲಿ ಕುಳಿತುಕೊಂಡಾಗ ಸರಿಯಾದ ನ್ಯಾಯ ನೀಡಲು ಸಾಧ್ಯ ಎಂದು ಶ್ರೀಗಳು ಹೇಳಿದರು.ಭಗವದ್ಗೀತೆ ಮತ್ತು ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಧರ್ಮದ ಚಿಂತನೆಗಳೇ ಅನೇಕ ಕಾನೂನುಗಳಿಗೆ ತಳಹದಿಯಾಗಿದೆ. ಅಪರಾಧ ಮಾಡಿದ ನಂತರ ಶಿಕ್ಷೆ ವಿಧಿಸುವುದು ಕಾನೂನು. ಅಪರಾಧ ಮಾಡದಂತೆ ತಡೆಯುವುದು ಭಗವದ್ಗೀತೆ ಎಂದು ತಿಳಿಸಿದರು.

ರಾಮಕೃಷ್ಣಾಶ್ರಮದ ಶ್ರೀ ಮೋಕ್ಷಾತ್ಮಾನಂದಜೀ ಮಹಾರಾಜ ಮಾತನಾಡಿ, ಭಗವದ್ಗೀತೆ ಅತ್ಯಂತ ಶ್ರೇಷ್ಠವಾದ ಗ್ರಂಥ. ಈ ಜಗತ್ತಿನಲ್ಲಿ ಶ್ರೇಷ್ಠವಾದದ್ದೆಲ್ಲ ಸೃಷ್ಠಿಯಾಗಿದ್ದು ಭಗವದ್ಗೀತೆಯಿಂದಲೇ ಎಂದರು.ಹೈಕೋರ್ಟ್‌ ನ್ಯಾಯಮೂರ್ತಿ ಮತ್ತು ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ದಿನೇಶಕುಮಾರ, ಭಗವದ್ಗೀತೆ ಮತ್ತು ಕಾನೂನು ಅವಿನಾಭಾವ ಸಂಬಂಧ ಹೊಂದಿವೆ. ಇದು ಬಹಳ ಗಹನವಾದ ವಿಷಯವಾಗಿದ್ದು, ವಿಶೇಷವಾದ ಜ್ಞಾನ ಇದ್ದಾಗ ಮಾತ್ರ ಭಗವದ್ಗೀತೆಯ ಮಹತ್ವ ಅರಿಯಲು ಸಾಧ್ಯವಿದೆ ಎಂದು ಹೇಳಿದರು.ಹೈಕೋರ್ಟ್‌ ನ್ಯಾಯಾಧೀಶ ಶ್ರೀಶಾನಂದ ಮಾತನಾಡಿ, ಧರ್ಮ ಮತ್ತು ಕಾನೂನು ಎರಡೂ ಪದಗಳ ಅರ್ಥ ಒಂದೇ. ಭಗವದ್ಗೀತೆಯ ಸಾರ ಮತ್ತು ಕಾನೂನಿನ ಅಂತಃಸತ್ವ ಎರಡೂ ಒಂದೇ ಆಗಿದೆ. ಎಲ್ಲ ಸಂದೇಹಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ ಎಂದು ಹೇಳಿದರು. ಭಗವದ್ಗೀತೆ ಉಲ್ಲೇಖಿಸಿ ನ್ಯಾಯಾಲಯಗಳು ತೀರ್ಪು ನೀಡಿದ್ದನ್ನು ಉದಾಹರಣೆ ಸಹಿತ ವಿವರಿಸಿದರು. ಹೈಕೋರ್ಟ್‌ ವಿಶ್ರಾಂತ ನ್ಯಾಯಾಧೀಶ ಅರವಿಂದ ಪಾಶ್ಚಾಪುರೆ ಮಾತನಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವಿಜಯಲಕ್ಷ್ಮೀ ವೇದಿಕೆಯಲ್ಲಿದ್ದರು. ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ. ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ಸದಾಶಿವ ಹಿರೇಮಠ ಸ್ವಾಗತಿಸಿದರು. ಎಂ.ಬಿ. ಜಿರಲಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಟಿ. ಹೆಗಡೆ ದಂಪತಿ ಮತ್ತು ಆರ್.ಪಿ. ಪಾಟೀಲ ದಂಪತಿ ಫಲಸಮರ್ಪಣೆ ಮಾಡಿದರು. ರಾಜೇಶ್ವರಿ ಕಾಪ್ಸೆ ಮತ್ತು ಪ್ರತಿಮಾ ಜೋಶಿ ಧ್ಯಾನ ಶ್ಲೋಕ ಹಾಡಿದರು. ಗೀತಾ ಹೆಗಡೆ ಸಂಗಡಿಗರು ಶ್ಲೋಕ ಪಠಣ ಮಾಡಿದರು. ಗುರುನಾಥ ಕೋರಿ ಮತ್ತು ಪೂರ್ಣಿಮಾ ಹೆಗಡೆ ನಿರೂಪಿಸಿದರು. ಸಚಿನ್ ಶಿವಣ್ಣವರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ
ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ