ಕಾರ್ಖಾನೆ ವಿರುದ್ಧ ಹೋರಾಟಕ್ಕೆ ಭಾಗ್ಯನಗರ ಬೆಂಬಲ: ಗುಪ್ತಾ

KannadaprabhaNewsNetwork | Published : Feb 19, 2025 12:47 AM

ಸಾರಾಂಶ

ಎಂಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ನಡೆಯುವ ಹೋರಾಟಕ್ಕೆ ಭಾಗ್ಯನಗರ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಫೆ. 24ರಂದು ನಡೆಯುವ ಬಂದ್ ವೇಳೆಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತೇವೆ.

ಕೊಪ್ಪಳ:

ಎಂಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ನಡೆಯುವ ಹೋರಾಟಕ್ಕೆ ಭಾಗ್ಯನಗರ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಫೆ. 24ರಂದು ನಡೆಯುವ ಬಂದ್ ವೇಳೆಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತೇವೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹೇಳಿದ್ದಾರೆ.

ಸಮೀಪದ ಭಾಗ್ಯನಗರದ ಶ್ರೀನಿವಾಸ ಮಂಗಲ ಭವನದಲ್ಲಿ ಮಂಗಳವಾರ ಜಿಲ್ಲಾ ಪರಸರ ಹಿತರಕ್ಷಣಾ ವೇದಿಕೆ ವತಿಯಿಂದ ಕೊಪ್ಪಳ ಬಂದ್ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಭಾಗ್ಯನಗರದಲ್ಲಿ ಸಾಮಾನ್ಯವಾಗಿ ಮಂಗಳವಾರ ರಜೆ ನೀಡಲಾಗುತ್ತದೆ. ಹೀಗಾಗಿ, ಈ ಬಾರಿ ಹೋರಾಟದ ಹಿನ್ನೆಲೆಯಲ್ಲಿ ಸೋಮವಾರವೇ ರಜೆ ನೀಡಿ ಬಂದ್ ಮಾಡುವುದಾಗಿ ಹೇಳಿದರು.

ಸಾಮರ್ಥ್ಯ ಮೀರಿದ ಆದಾಯ ಗಳಿಸಲು ನಿಯಮ ಮೀರಿ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ. ಜಿಲ್ಲಾ ಹೋರಾಟ, ೩೭೧(ಜೆ) ಮೀಸಲಾತಿ ಮಾದರಿಯ ಹೋರಾಟ ಮಾಡಬೇಕು. ನೀರಾವರಿಯಿಂದಲೇ ಅಭಿವೃದ್ಧಿ ಸಾಧ್ಯ. ಭಾಗ್ಯನಗರಕ್ಕೂ ಕೂಡಾ ಹೋರಾಟ ಹೊಸದೇನಲ್ಲ. ನಾವು ಮೇಲ್ಸೇತುವೆ, ಪಟ್ಟಣ ಪಂಚಾಯಿತಿಗಾಗಿ ಹೋರಾಟ ಮಾಡಿದ್ದೇವೆ ಎಂದರು.ಗ್ರಾಮ‌ ಪಂಚಾಯಿತಿ ಉಪಾಧ್ಯಕ್ಷ, ಕೂದಲು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹೊನ್ನುರಸಾಬ್ ಬೈರಾಪುರ ಮಾತನಾಡಿ, ಕೊಪ್ಪಳ ಬಚಾವ್ ಮಾಡಬೇಕಾದರೆ ಕಾರ್ಖಾನೆ ಸ್ಥಾಪನೆ ತಡೆಯಬೇಕು. ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದ್ದು, ಇದಕ್ಕೆ ನಮ್ಮ ಬೆಂಬಲವಿದೆ. ಇದನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು

ಜವಳಿ ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣಾ ಕಬ್ಬೇರ್ ಮಾತನಾಡಿ, ಪರಿಸರ ಉಳಿಸೋಣ. ಉದ್ಯೋಗ ಮಾಡೋಣ. ಸಂಪೂರ್ಣವಾಗಿ ಬಂದ್‌ ಬೆಂಬಲಿಸೋಣ ಎಂದರು.

ಈ ವೇಳೆ ರಮೇಶ ತುಪ್ಪದ, ಗಿರೀಶ ಪಾನಘಂಟಿ, ಮಂಜುನಾಥ ಅಂಗಡಿ, ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ಮುಖಂಡರಾದ ಯಮನಪ್ಪ ಕಬ್ಬೇರ, ಸುರೇಶ ಪೆದ್ದಿ, ಶ್ರೀನಿವಾಸ ಹ್ಯಾಟಿ, ಶಂಕ್ರಪ್ಪ ನಿಂಗಲಬಂಡಿ, ಪಪಂ ಸದಸ್ಯರಾದ ಪರಶುರಾಮ ನಾಯಕ, ಮೋಹನ ಅರಕಲ್, ದಾನಪ್ಪ ಕವಲೂರು, ಸುರೇಶ ದರಗದಕಟ್ಟಿ, ಶರಣಪ್ಪ ಸಜ್ಜನ, ಮಂಜುನಾಥ ಅಂಗಡಿ, ರವೀಂದ್ರ, ಸಂತೋಷ ದೇಶಪಾಂಡೆ, ಅನಿಲ ಇದ್ದರು.

Share this article