ಗದಗ ಕೇಶವ ಬಡಾವಣೆಯಲ್ಲಿ ಭಜನೆ ಸಂಸ್ಕೃತಿ–ಭಕ್ತಿ

KannadaprabhaNewsNetwork |  
Published : Sep 01, 2025, 01:04 AM IST
ಬಡಾವಣೆಯ ಎಲ್ಲರೂ ಸೇರಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು.  | Kannada Prabha

ಸಾರಾಂಶ

ಗದಗ ನಗರದ ಕೇಶವ ಬಡಾವಣೆಯಲ್ಲಿ ಶ್ರಾವಣ ಮಾಸವೆಲ್ಲಾ ಭಜನೆಗಳ ನಾದವೇ ಸದ್ದು ಮಾಡಿತು. ಪ್ರತಿದಿನ ಬೆಳಗ್ಗೆಯೇ ಅಷ್ಟಭುಜ ಈಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಭಜನೆ, ಬಡಾವಣೆಯ ಪ್ರತಿಯೊಂದು ಬೀದಿಯೂ ಸುತ್ತಿ ಜನರ ಮನೆ ಮನೆಗೂ ತಲುಪಿ ಜನರಲ್ಲಿ ಭಕ್ತಿ ಭಾವ ಮೂಡಿಸುವುದಲ್ಲದೇ ಗ್ರಾಮೀಣ ಸೊಗಡನ್ನು ನೆನಪಿಗೆ ತರುವಲ್ಲಿ ಯಶಸ್ಸು ಕಂಡಿತು.

ವಿಶೇಷ ವರದಿ

ಗದಗ: ನಗರದ ಕೇಶವ ಬಡಾವಣೆಯಲ್ಲಿ ಶ್ರಾವಣ ಮಾಸವೆಲ್ಲಾ ಭಜನೆಗಳ ನಾದವೇ ಸದ್ದು ಮಾಡಿತು. ಪ್ರತಿದಿನ ಬೆಳಗ್ಗೆಯೇ ಅಷ್ಟಭುಜ ಈಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಭಜನೆ, ಬಡಾವಣೆಯ ಪ್ರತಿಯೊಂದು ಬೀದಿಯೂ ಸುತ್ತಿ ಜನರ ಮನೆ ಮನೆಗೂ ತಲುಪಿ ಜನರಲ್ಲಿ ಭಕ್ತಿ ಭಾವ ಮೂಡಿಸುವುದಲ್ಲದೇ ಗ್ರಾಮೀಣ ಸೊಗಡನ್ನು ನೆನಪಿಗೆ ತರುವಲ್ಲಿ ಯಶಸ್ಸು ಕಂಡಿತು.

ಭಜನೆಯ ಹಿನ್ನೆಲೆ: ಭಜನೆ ಎಂಬುದು ಕನ್ನಡದ ಹಳ್ಳಿ ಸಂಸ್ಕೃತಿಯ ಹೃದಯ. ಹಿಂದಿನ ದಿನಗಳಲ್ಲಿ ಹಳ್ಳಿಯ ಓಣಿ, ಬೀದಿಗಳಲ್ಲಿ ನಸುಕಿನ ಜಾವದಿಂದಲೇ ಹೊರಟು ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಕೂಡಿ ಭಜನೆ ಮಾಡುವ ಸಂಪ್ರದಾಯವಿತ್ತು. ಅದು ಕೇವಲ ಭಕ್ತಿಯ ಚಟುವಟಿಕೆ ಮಾತ್ರವಲ್ಲ, ಜನರನ್ನು ಒಂದೇ ಕುಟುಂಬದಂತೆ ಕಟ್ಟುವ ಸೇತುವೆಯಾಗಿತ್ತು. ಈ ಸಂಸ್ಕೃತಿಯೇ ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿ ನೋಡಲು ಸಿಗುತ್ತಿದ್ದು ಗ್ರಾಮೀಣ ಸಂಸ್ಕೃತಿಯನ್ನು ಕೇಶವ ಬಡಾವಣೆ ಜೀವಂತವಾಗಿರಿಸಿದೆ.

ಜನರಲ್ಲಿ ಮೂಡುವ ಒಗ್ಗಟ್ಟು: ಭಜನೆಯಿಂದ ಬಡಾವಣೆಯ ಜನರ ನಡುವೆ ಒಗ್ಗಟ್ಟು ಹೆಚ್ಚುತ್ತದೆ. ಪ್ರತಿದಿನ ಒಟ್ಟಾಗಿ ಕೂಡುವುದರಿಂದ ಪರಸ್ಪರ ಪರಿಚಯ, ಸ್ನೇಹ, ಸಹಕಾರ ಮನೋಭಾವ ಬೆಳೆದು ಬರುತ್ತದೆ. ಒಬ್ಬರ ಮನೆಗೆ ದುಃಖ ಬಂದಾಗ ನಾವು ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲುತ್ತೇವೆ, ಸಂತೋಷ ಬಂದಾಗ ಒಟ್ಟಿಗೆ ಹಂಚಿಕೊಳ್ಳುತ್ತೇವೆ ಎಂಬ ಭಾವನೆ ಈ ಭಜನೆಯಿಂದಲೇ ಬಡಾವಣೆಯಲ್ಲಿ ತಲೆದೋರಿದೆ. ಮಕ್ಕಳಿಗೆ ಇದು ಸಂಸ್ಕಾರದ ಪಾಠವಾಗಿದೆ. ಯುವಕರಿಗೆ ಇದು ಶ್ರದ್ಧೆಯ ದಾರಿಯಾಗಿದೆ, ಹಿರಿಯರಿಗೆ ಇದು ಹಳೆಯ ನೆನಪುಗಳ ಪುನರುಜ್ಜೀವನವಾಗಿದೆ.

ಭಕ್ತಿಯ ಭಾವ: ಭಜನೆಯಾಗುವಾಗ ತಾಳ-ಮದ್ದಲೆ, ಹಾರ್ಮೋನಿಯಂ, ಮೃದುಂಗಗಳ ಧ್ವನಿ, ಜೊತೆಗೆ ಭಕ್ತರ ಕಂಠದಿಂದ ಹರಿದುಬರುವ ಹಾಡು – ಇವೆಲ್ಲವೂ ಒಟ್ಟಾಗಿ ದೇವರ ಸಾನ್ನಿಧ್ಯವೇ ಬಂದಂತೆ ಭಾವನೆ ಮೂಡಿಸುತ್ತವೆ. ಮನೆ ಬಾಗಿಲು ತಟ್ಟಿದಂತಾಗುವ ಈ ಭಜನೆ, ಪ್ರತಿದಿನವೂ ಜನರ ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುತ್ತದೆ. ದೇವರನ್ನು ದೇವಾಲಯದಲ್ಲೇ ಕಂಡುಬರಬೇಕೆಂದಿಲ್ಲ, ನಮ್ಮ ಬಡಾವಣೆಯ ಬೀದಿಗಳಲ್ಲಿ ಭಜನೆಯ ರೂಪದಲ್ಲಿ ಕಂಡು ಬರುತ್ತಾನೆ ಎಂದು ಬಡಾವಣೆಯ ಹಿರಿಯರು ಹೆಮ್ಮೆಪಡುತ್ತಾರೆ.

ನಗರೀಕರಣದ ನಡುವೆ ಅಪರೂಪದ ಉದಾಹರಣೆ

ಇಂದಿನ ನಗರ ಪ್ರದೇಶಗಳಲ್ಲಿ ಜನರು ಮನೆಯ ಬಾಗಿಲು ತೆರೆದು ಹೊರಗೆ ಬರುತ್ತಿಲ್ಲ, ನೆರೆಹೊರೆಯವರನ್ನೇ ಗುರುತಿಸುವುದಿಲ್ಲ ಎಂಬ ಸಾಮಾನ್ಯ ಟೀಕೆಗಳಿವೆ. ಆದರೆ, ಕೇಶವ ಬಡಾವಣೆಯ ಈ ಭಜನೆ ಸಂಸ್ಕೃತಿ ಆ ಆರೋಪಕ್ಕೆ ಅಪರೂಪದ ಉತ್ತರವಾಗಿದೆ. ಇಲ್ಲಿ ಪ್ರತಿಯೊಂದು ಮನೆ ಬಾಗಿಲು ತೆರೆದಿದೆ, ಪ್ರತಿಯೊಂದು ಮನಸ್ಸು ಒಂದಾಗಿದೆಯೆಂಬುದೇ ಇದರ ವೈಶಿಷ್ಟ್ಯವಾಗಿದೆ.

ಆಗಸ್ಟ್ 31ರಂದು ಶ್ರಾವಣ ಮಾಸದ ಭಜನೆಗೆ ಮುಕ್ತಾಯ ಹಾಗೂ ಗಣೇಶ ಮೂರ್ತಿಯ ಮೆರವಣಿಗೆಯೊಂದಿಗೆ ಹಬ್ಬಕ್ಕೂ ಕೊನೆ ಕಂಡಿತು. ಆದರೂ, ಭಜನೆಯ ನೆನಪು, ಒಗ್ಗಟ್ಟಿನ ಬಾಂಧವ್ಯ ಮತ್ತು ಭಕ್ತಿಯ ಸಾಂಸ್ಕೃತಿಕ ಬಲ ಇಡೀ ವರ್ಷ ಜನರ ಬದುಕಿಗೆ ಸ್ಫೂರ್ತಿಯಾಗಿದೆ ಎಂದು ಬಡಾವಣೆಯ ಅಧ್ಯಕ್ಷ ಅಂದಪ್ಪ ಬಿಂಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!