ಮಾನಸಿಕವಾಗಿ ಸದೃಢವಾಗಿರಲು ಭಜನೆ ಸಹಾಯಕಾರಿ: ವಸುಧಾ ಶರ್ಮಾ

KannadaprabhaNewsNetwork |  
Published : Nov 25, 2025, 02:45 AM IST
24ಎಸ್.ಆರ್‍.ಎಸ್‌1 (ನಗರದ ರಂಗಧಾಮದಲ್ಲಿ ಪ್ರಜ್ವಲ ಟ್ರಸ್ಟ್ನಿಂದ ಆಯೋಜಿಸಿದ್ದ  ಪ್ರಜ್ವಲೋತ್ಸವ-3, ಶ್ರೀಧರ ಸ್ಮರಣಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.) | Kannada Prabha

ಸಾರಾಂಶ

ನಮ್ಮ ಸನಾತನ ಸಂಸ್ಕೃತಿಯಲ್ಲಿ ಭಜನೆಗೆ ಅತ್ಯಂತ ವಿಶೇಷವಾದ ಸ್ಥಾನವಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಭಜನೆಯಿಂದ ವಿಭಜನೆ ಸಾಧ್ಯವಿಲ್ಲ. ಮಾನಸಿಕವಾಗಿ ಸದೃಢವಾಗಿರಲು, ಪರಮಾತ್ಮನೊಡನೆ ಸಂಪರ್ಕ ಸಾಧಿಸಿ ಸಾಂಗತ್ಯ ಬೆಳೆಸಲು ಭಜನೆ ಸಹಾಯಕಾರಿ ಎಂದು ಸಂಗೀತ ಕಲಾವಿದೆ ವಸುಧಾ ಶರ್ಮಾ ಹೇಳಿದರು.

ನಗರದ ರಂಗಧಾಮದಲ್ಲಿ ಪ್ರಜ್ವಲ ಟ್ರಸ್ಟ್‌ನಿಂದ ಆಯೋಜಿಸಿದ್ದ ಪ್ರಜ್ವಲೋತ್ಸವ-3, ಶ್ರೀಧರ ಸ್ಮರಣಾಮೃತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸನಾತನ ಸಂಸ್ಕೃತಿಯಲ್ಲಿ ಭಜನೆಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಭಗವಂತನಿಗೆ ಹತ್ತಿರವಾಗಲು ಅತ್ಯಂತ ಸರಳವಾದ ಮಾರ್ಗ ಭಜನೆ. ಹಿಂದೆಲ್ಲ ದಿನಂಪ್ರತಿ ಸಾಯಂಕಾಲ ಪ್ರತಿಮನೆಯಲ್ಲಿ ಸದಸ್ಯರೆಲ್ಲರೂ ಒಂದೆಡೆ ಸೇರಿ ಭಗವಂತನ‌ ನಾಮ ಸ್ಮರಣೆ ಮಾಡುವ ಪರಿಪಾಠವಿದ್ದಿತ್ತು. ಆದರೆ ಇತ್ತೀಚೆಗೆ ಕೆಲಸದ ಒತ್ತಡ, ಸಮಯದ ಅಭಾವದಿಂದ ಭಜನೆಯ ರೂಢಿ ತಪ್ಪುತ್ತಿದೆ. ಭಜನೆಯ ಕಾರಣದಿಂದಾಗಿ ಕುಟುಂಬದವರೆಲ್ಲಾ ಒಂದೆಡೆ ಸೇರುತ್ತಿದ್ದ ಘಳಿಗೆಗಳು ಕಡಿಮೆಯಾಗುತ್ತಿದ್ದು, ಮುಂದಿನ ಪೀಳಿಗೆಗೆ ಭಜನೆಯ ಮಹತ್ವ, ಭಕ್ತಿ, ಭಾವ, ಕುಟುಂಬದ ಮಹತ್ವಗಳನ್ನು ತಿಳಿಸಲು ಸಾಧ್ಯವಾಗದಿರುವುದು ವಿಷಾದನೀಯವಾಗಿದೆ. ಅಂತಹ ಸುಮಧುರ ಕ್ಷಣಗಳನ್ನು ನಾವೆಲ್ಲರೂ ಪುನಃ ಮರಳಿ ತರಬೇಕಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟಕರಾಗಿದ್ದ ಶಂಕರನಾರಾಯಣ ಹೆಗಡೆ ಹಲಗಡ್ಡೆ ಶ್ರೀಧರ ಸ್ವಾಮಿಗಳ ಜೀವನ ಚರಿತ್ರೆಯ ಕುರಿತಾಗಿ ಅತ್ಯಂತ ಸೊಗಸಾಗಿ ಮಾತನಾಡಿದರು. ಚಿತ್ರ ಕಲಾವಿದ ಸತೀಶ ಯಲ್ಲಾಪುರ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದ ಭಾಗವಾಗಿ ನಡೆದ ಸಾಧನೆಯ ಹಾದಿಯಲ್ಲೊಂದು ಸಂಮ್ಮಾನದಲ್ಲಿ ಉದಯೋನ್ಮುಖ ಪ್ರತಿಭೆ ತೇಜಸ್ವಿ ಗಾಂವ್ಕರ್, ಬಹುಮುಖ ಪ್ರತಿಭೆ ವೀಣಾ ಹೆಗಡೆ ಗೊಡ್ವೇಮನೆ, ಕಲಾ ಪೋಷಕರಾದ ಆರ್.ಎನ್. ಹೆಗಡೆ ಬಂಡೀಮನೆ, ಎಂ.ಎನ್. ಹೆಗಡೆ ಬಂಡೀಮನೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗೀತ ರತ್ನಮಾಲಾ ಪುಸ್ತಕ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ವಿ.ಪಿ. ಹೆಗಡೆ ವೈಶಾಲಿ, ನಾಗರತ್ನಾ ಲೋಕೇಶ್‌ ಹುಲೇಮಳಗಿ, ಕಲಾವತಿ ಹೆಗಡೆ, ಮಂಗಲಾ ಭಟ್, ಅನಸೂಯಾ ಹೆಗಡೆ, ನೇತ್ರಾವತಿ ಹೆಗಡೆ ಮುಂತಾದವರಿದ್ದರು.

ಮುಖ್ಯ ಭಾಗವಾದ ಶ್ರೀಧರ ಸ್ಮರಣಾಮೃತ ಗಾಯನ ಕಾರ್ಯಕ್ರಮದಲ್ಲಿ ಬಿಂದು ಹೆಗಡೆ, ರವಿ ಹೆಗಡೆ ಅಳ್ಳಂಕಿ, ನಾಗೇಶ ಮಧ್ಯಸ್ಥ ರಚಿಸಿದ ಶ್ರೀಧರ ಕುರಿತಾದ ಭಜನೆಗಳನ್ನು, ಶ್ರೀನಿಧಿ ಹೆಗಡೆ, ಸುಮಾ ಹೆಗಡೆ, ಸುಷ್ಮಾ ಹೆಗಡೆ, ಶ್ರೀಲತಾ ಗುರುರಾಜ, ಶ್ರೀರಂಜಿನಿ ಸಂತ, ವಿ.ವಸುಧಾ ಶರ್ಮಾ, ವಿಶ್ವೇಶ್ವರ ಭಟ್ ಖರ್ವಾ ಅತ್ಯಂತ ಸುಶ್ರಾವ್ಯವಾಗಿ ಹಾಡಿ, ಶ್ರೋತೃಗಳನ್ನು ಭಕ್ತಿಸಾಗರದಲ್ಲಿ ತೇಲಿಸಿದರು. ಹಾರ್ಮೋನಿಯಂನಲ್ಲಿ ಅಜಯ್ ವರ್ಗಾಸರ, ತಬಲಾದಲ್ಲಿ ಗುರುರಾಜ ಆಡುಕಳ, ಗಣೇಶ್ ಗುಂಡ್ಕಲ್, ವಿಜಯೇಂದ್ರ ಅಜ್ಜೀಬಳ್, ತಾಳದಲ್ಲಿ ಅನಂತಮೂರ್ತಿ ಭಟ್ ಸಹಕರಿಸಿದರು. ಮಂಜುನಾಥ ಭಟ್ ಗೊರಮನೆ ಅತ್ಯಂತ ಸರಳವಾಗಿ ಶ್ರೀಧರರ‌ ಜೀವನಕಥೆಯನ್ನು ವಾಚಿಸಿದರೆ, ವಿಶೇಷ ಆಕರ್ಷಣೆಯಾಗಿ ಕಲಾವಿದ ಸತೀಶ ಯಲ್ಲಾಪುರ ಕಥೆಗೆ ತಕ್ಕ ಚಿತ್ರಗಳನ್ನು ರಚಿಸುತ್ತಾ ತಮ್ಮ ಕಲಾಪ್ರದರ್ಶನ ನೀಡಿದರು.

ಕಲಾವತಿ ಹೆಗಡೆ ಪ್ರಾರ್ಥಿಸಿದರು. ಟ್ರಸ್ಟ್ ಕಾರ್ಯದರ್ಶಿ ಸುಮಾ ಹೆಗಡೆ ವರದಿ ವಾಚಿಸಿದರು. ಕವಿತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಬಿಂದು ಹೆಗಡೆ ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌