ಹೊಸಪೇಟೆ: ಭಾರತೀಯ ಭಕ್ತಿ ಪರಂಪರೆಯಲ್ಲಿ ಕನಕದಾಸ, ತುಕಾರಾಮ ಪ್ರಮುಖ ಸಂತರು. ಇವರ ಕೀರ್ತನೆಗಳು, ಅಭಂಗಗಳು ಭಕ್ತಿಯ ಆಳವಾದ ಅನುಭವ ನೀಡುತ್ತವೆ. ಇಬ್ಬರೂ ಸರಳ ಭಾಷೆಯಲ್ಲಿ ತಮ್ಮ ಭಾವನೆಗಳನ್ನು ವೈಚಾರಿಕ ತತ್ವದ ಮೂಲಕ ಪ್ರತಿಪಾದಿಸಿದರು ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ವಿಠಲರಾವ್ ಗಾಯಕವಾಡ ಹೇಳಿದರು.
ಇವರ ಚಳವಳಿಗಳು ಮತಾಂತರಕ್ಕಿಂತಲೂ ಹೆಚ್ಚಾಗಿ ಸಮಾಜ ಸುಧಾರಣೆ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಪ್ರೋತ್ಸಾಹಿಸಿತು. ದಾಸರ ಕೀರ್ತನೆಗಳು ಇಂದಿಗೂ ಜನರನ್ನು ಪ್ರೇರಿಸುತ್ತಿವೆ ಮತ್ತು ಅವರ ಬೋಧನೆಗಳು ಶಾಶ್ವತವಾಗಿರುತ್ತವೆಂದು ತಿಳಿಸಿದರು.
ಕನಕದಾಸರು ಮತ್ತು ತುಕಾರಾಮರು ಇಬ್ಬರೂ ಭಾರತೀಯ ಭಕ್ತಿ ಪರಂಪರೆಯಲ್ಲಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ಕೃತಿಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಜನರನ್ನು ಪ್ರೇರಿಸುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಕಲಾವಿದ ಬೀಳಗಿಯ ಸಿದ್ಧಪ್ಪ ಬಿದರಿ ಅವರನ್ನು ಸನ್ಮಾನಿಸಲಾಯಿತು.ಹಾಲುಮತ ಅಧ್ಯಯನ ಕೇಂದ್ರ ಸಂಚಾಲಕ ಡಾ. ಎಫ್.ಟಿ. ಹಳ್ಳಿಕೇರಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನಕದಾಸ ಜಯಂತಿ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಕೀರ್ತನೆಗಳ ಗಾಯನ ಸ್ಪರ್ಧೆ ಹಾಗೂ ಚಿತ್ರಕಲೆಯ ಸ್ಪರ್ಧೆ ಆಯೋಜಿಸಲಾಗಿತ್ತು. ಇದರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಉಪನ್ಯಾಸಕಿ ಪದ್ಮಾವತಿ ಕೆ.ನಿರ್ವಹಿಸಿದರು.