ನೇಕಾರರ ಬೇಡಿಕೆಗೆ ಸ್ಪಂದಿಸದಿದ್ರೆ ಹೋರಾಟ ತೀವ್ರ

KannadaprabhaNewsNetwork |  
Published : Nov 22, 2024, 01:16 AM IST
ಬನಹಟ್ಟಿಯ ಕೈಮಗ್ಗ ಅಭಿವೃದ್ಧಿ ನಿಗಮ ಕಚೇರಿ ಎದುರು ಕೈಮಗ್ಗ ನೇಕಾರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ನೇಕಾರರ ದಶಕಗಳ ಕಾಲದ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೆ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘಟನೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುತ್ತದೆ, ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಎಚ್ಚರಿಕೆ ನೀಡಿದರು

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನೇಕಾರರ ದಶಕಗಳ ಕಾಲದ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೆ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘಟನೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುತ್ತದೆ, ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಬನಹಟ್ಟಿ ಕೇಂದ್ರ ಕಚೇರಿ ಎದುರು ಕೈಮಗ್ಗ ನೇಕಾರರೊಡನೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಕಳೆದ ೩೭ ವರ್ಷಗಳಿಂದ ಡಚ್ ಮನೆಗಳಲ್ಲಿ ವಾಸವಿರುವ ಕೈಮಗ್ಗ ನೇಕಾರರ ಮನೆಗಳಿಗೆ ಸಿಟಿಎಸ್ ಉತಾರ ನೀಡುವಲ್ಲಿ ಇದೂವರೆಗೆ ಯಾವ ಸರ್ಕಾರಗಳೂ ಪ್ರಾಮಾಣಿಕ ಯತ್ನ ಮಾಡಿಲ್ಲ. ವರ್ಷಕ್ಕೆ ಆರು ತಿಂಗಳು ಮಾತ್ರ ದುಡಿಯಲು ಅವಕಾಶ ನೀಡುತ್ತಿರುವ ನಿಗಮದ ಕಾರಣಕ್ಕೆ ನೇಕಾರರು ಕುಟುಂಬ ನಿರ್ವಹಿಸಲು ಹರಸಾಹಸ ಪಡುತ್ತಿದ್ದಾರೆ. ಹಲವಾರು ನೇಕಾರರಿಗೆ ಅರಣ್ಯ ಇಲಾಖೆಗೆ ಸೇರಿದ ಡಚ್ ಕಾಲೋನಿ ಪ್ರದೇಶದಲ್ಲೇ ನಿವೇಶನಗಳನ್ನು ಸರ್ಕಾರ ನೀಡದ್ದರಿಂದ ಬಾಡಿಗೆ ಮನೆಗಳಲ್ಲಿ ವಾಸವಿರುವ ನೇಕಾರರು ದುಡಿಮೆ ಇಲ್ಲದೇ ಜೀವನ ನಿರ್ವಹಣೆಯೇ ಕಷ್ಟವಾದ್ದರಿಂದ ಬಾಡಿಗೆ ಕಟ್ಟಲು ಮತ್ತು ತಮ್ಮ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಹೆಣಗಾಡುವಂತಾಗಿದೆ. ಯುವಕರು ಕೈಮಗ್ಗ ನೇಕಾರಿಕೆ ಸಂಕಷ್ಟ ತಾಳದೇ ಹೊರರಾಜ್ಯಗಳಿಗೆ ಕುಟುಂಬ ಸಮೇತ ತೆರಳುತ್ತಿದ್ದು, ವಯಸ್ಸಾದ ನೇಕಾರರು ಅತಂತ್ರರಾಗಿ ಬದುಕಲು ಹೆಣಗುತ್ತಿದ್ದಾರೆ.

, ಯಾವುದೇ ಸಮರ್ಪಕ ಸೌಲಭ್ಯ, ಉದ್ಯೋಗ ಭದ್ರತೆಯಿಲ್ಲದೇ ಕೇವಲ ವರ್ಷಕ್ಕೆ ಆರು ತಿಂಗಳು ಮಾತ್ರ ದಿನಕ್ಕೆ ೮-೧೦ ತಾಸು ನೇಯ್ಗೆ ಮಾಡಿದರೂ ಎರಡು ಹಿರಿಯ ಜೀವಗಳಿಗೆ ಸಾಕಾಗುವಷ್ಟು ಕೂಲಿ ಸಿಗುತ್ತಿಲ್ಲ. ನೇಕಾರರಿಗೆ ನಿವೇಶನ ನೀಡುವ, ಇರುವ ಮನೆಗಳ ಹಕ್ಕುಪತ್ರ ನೀಡಿ ಸಿಟಿಎಸ್ ಉತಾರ ನೀಡಲೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗಂಜಿ ಹೋರಾಟ, ಹುಬ್ಬಳ್ಳಿವರೆಗೆ ಪಾದಯಾತ್ರೆ, ಪ್ರತಿಭಟನೆ ಹೋರಾಟ ನಡೆಸಿದರೂ ಜವಳಿ ಸಚಿವರು ಮತ್ತು ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ನಿಗಮದಲ್ಲಿ ಕೆಲ ತಿಂಗಳ ಹಿಂದೆ ಆಗಿರುವ ಅವ್ಯವಹಾರದ ತನಿಖೆ ನಡೆಸಿ ತಪ್ಪಿತಸ್ತರಿಗೆ ಉಗ್ರ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದರೂ ಹೊಂದಾಣಿಕೆ ರಾಜಕಾರಣದ ಕಾರಣ ಪರಿಣಾಮ ಶೂನ್ಯವಾಗಿದೆ. ನಿಗಮದ ಆಸ್ತಿಗಳನ್ನು ಮಾರಾಟ ಮಾಡಿ ನಿಗಮವನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ೪೮ ಸಾವಿರ ನೇಕಾರರ ಪೈಕಿ ಇದೀಗ ಕೇವಲ ೩೮೦೦ ನೇಕಾರರು ಮಾತ್ರ ಉದ್ಯೋಗದಲ್ಲಿದ್ದರೂ ಸರ್ಕಾರ ನೇಯ್ಗೆ ಪರಂಪರೆ ಉಳಿಸಲು ಮುಂದಾಗದ ಕಾರಣ ವೃದ್ಧ ನೇಕಾರರಿಗೆ ಮಾಸಾಶನ, ಕಾರ್ಮಿಕ ಸೌಲಭ್ಯ ನೀಡುತ್ತಿಲ್ಲವಾದ್ದರಿಂದ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿರಂತವಾಗಿರುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಸದಾಶಿವ ಗೊಂದಕರ, ಸದಾಶಿವ ಬರಗಿ, ರಾಜೇಂದ್ರ ಮಿರ್ಜಿ, ಶ್ರೀಶೈಲ ಮುಗಳೊಳ್ಳಿ, ಕವಿತಾ ಬಾಣಕಾರ, ರಾಜೇಶ್ವರಿ ಬಾಣಕಾರ, ಚನ್ನವ್ವ ಜುಂಜಪ್ಪನವರ, ರಾಜೇಶ್ವರಿ ಗುಳೇದಗುಡ್ಡ, ಸಿದ್ದು ಕಡ್ಲಿಮಟ್ಟಿ, ಲಕ್ಷ್ಮೀ ಬರಗಿ, ಬಂದೇನಮಾಜ್ ಮಹಾಲಿಂಗಪೂರ, ಶಮಾಮ್ ಮುಲ್ಲಾ, ಉಬ್ಬತ್ ಝಾರೆ, ಪಾರ್ವತಿ ಅಮಟಿ ಸೇರಿದಂತೆ ಅನೇಕ ನೇಕಾರರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌