ಹುಲಿಗೆಮ್ಮ ಅಂಜನಾದ್ರಿ ಗವಿಮಠದಲ್ಲಿ ಭಕ್ತಸಾಗರ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯೇ ಭಕ್ತರು ಜಿಲ್ಲಾದ್ಯಂತ ಇರುವ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಕೊಪ್ಪಳ: ಚಂದ್ರಗ್ರಹಣ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯೇ ಭಕ್ತರು ಜಿಲ್ಲಾದ್ಯಂತ ಇರುವ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು.ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಗ್ರಹಣದ ಆನಂತರ 30 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿ ಅಮ್ಮನವರ ದರ್ಶನ ಪಡೆದರು.ಈ ಭಾಗದಲ್ಲಿ ಗ್ರಹಣದ ಆನಂತರ ಮನೆಯಲ್ಲಿ ಸ್ನಾನ, ಪೂಜೆಗಳನ್ನು ಮುಗಿಸಿಕೊಂಡು, ಗುಡಿಗೆ ತೆರಳಿ ದೇವರ ದರ್ಶನ ಪಡೆಯುವುದು ವಾಡಿಕೆ. ಇದರಂತೆ ಹುಲಿಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಗ್ರಹಣದ ಬಳಿಕ ಭಾನುವಾರ ಅಮ್ಮನವರ ಸನ್ನಿಧಿಗೆ ತೆರಳಿ ಅಮ್ಮನವರ ದರ್ಶನ ಪಡೆದರು.ಭಾನುವಾರ ಬೆಳಗಿನಜಾವ ಗ್ರಹಣ ಮುಗಿದ ಆನಂತರ ಅರ್ಚಕರು ದೇವಸ್ಥಾನದ ಗರ್ಭಗುಡಿಯನ್ನು ಸ್ವಚ್ಛಗೊಳಿಸಿದರು. ಬಳಿಕ ಪುಣ್ಯವಾಚನ ಮಾಡಲಾಯಿತು. ಪುಣ್ಯವಾಚನ ಮಾಡಿದ ಆನಂತರ ಅಮ್ಮನವರಿಗೆ ಅಭಿಷೇಕ ಹಾಗೂ ಅಲಂಕಾರ ಮಾಡಲಾಯಿತು. ಅದಾದ ಮೇಲೆ ಭಕ್ತರಿಗೆ ಅಮ್ಮನವರ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಯಿತು.ಶನಿವಾರ ಸೀಗಿ ಹುಣ್ಣಿಮೆ ಪ್ರಯುಕ್ತ ಹುಲಿಗಮ್ಮ ದೇವಸ್ಥಾನಕ್ಕೆ 3 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೋಳಿ ಹುಣ್ಣಿಮೆಯವರೆಗೆ ಪ್ರತಿ ಹುಣ್ಣಿಮೆಗೆ ದೇವಸ್ಥಾನಕ್ಕೆ ಲಕ್ಷೋಪಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯಲ್ಲೂ ಗ್ರಹಣದ ಮರುದಿನ ಸಹಸ್ರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. ಆಂಜನೇಯ ದೇವಸ್ಥಾನದಲ್ಲಿ ಗ್ರಹಣದ ಆನಂತರ ವಿಶೇಷ ಅಭಿಷೇಕ ಮಾಡಿ, ಬೆಳಗ್ಗೆಯೇ ದರ್ಶನಕ್ಕೆ ಅವಕಾಶ ನೀಡಲಾಯಿತು. ಆಂಜನೇಯನನ್ನು ನೋಡಲು ದೂರದಿಂದ ಬಂದಿದ್ದ ಭಕ್ತರು ಶನಿವಾರ ಸಂಜೆ ದರ್ಶನ ದೊರೆಯದೇ ಇರುವುದರಿಂದ ರಾತ್ರಿ ಸುತ್ತಮುತ್ತಲ ಪ್ರದೇಶದಲ್ಲಿ ವಾಸ್ತವ್ಯ ಮಾಡಿ, ಭಾನುವಾರ ದರ್ಶನ ಪಡೆದರು.ಕೊಪ್ಪಳ ಗವಿಮಠದಲ್ಲಿಯೂ ಗ್ರಹಣದ ಹಿನ್ನೆಲೆಯಲ್ಲಿ ಗ್ರಹಣದ ಆನಂತರ ಕರ್ತೃ ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿದ್ದರು. ಆನಂತರ ಭಕ್ತರು ದರ್ಶನ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು.

Share this article