ನ.1ರಂದು ನಗರದಲ್ಲಿ ಗರಡಿ ಚಿತ್ರದ ಟೀಸರ್ ಬಿಡುಗಡೆ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ಇಲ್ಲಿಯ ನಗರಸಭೆ ಕ್ರೀಡಾಂಗಣದಲ್ಲಿ ನ.1ರಂದು ಸಂಜೆ 6.30ಕ್ಕೆ ನಟ ದರ್ಶನ ಅವರಿಂದ ಗರಡಿ ಚಲನಚಿತ್ರದ ಟೀಸರ್ ಬಿಡುಗಡೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಇಲ್ಲಿಯ ನಗರಸಭೆ ಕ್ರೀಡಾಂಗಣದಲ್ಲಿ ನ.1ರಂದು ಸಂಜೆ 6.30ಕ್ಕೆ ನಟ ದರ್ಶನ ಅವರಿಂದ ಗರಡಿ ಚಲನಚಿತ್ರದ ಟೀಸರ್ ಬಿಡುಗಡೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ನಗರದ ಪ್ರವಾಸಿ ಮಂದರಿದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚಿತ್ರದಲ್ಲಿ ದರ್ಶನ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದರ್ಶನ ಶಿಷ್ಯ ಸೂರಿ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ನಾನು ಹಾಗೂ ನನ್ನ ಅಳಿಯ ಸೂಜೈ ಸಹ ಚಿತ್ರದಲ್ಲಿ ನಟನೆ ಮಾಡಿದ್ದೇವೆ. ಚಿತ್ರದ ಸಂಭಾಷಣೆ ಹಾಗೂ ನಿರ್ದೇಶನವನ್ನು ಯೋಗರಾಜ್ ಭಟ್, ಸಂಗೀತವನ್ನು ಹರಿಕೃಷ್ಣ ರಚಿಸಿದ್ದಾರೆ. ಗರಡಿಮನೆಯ ಯಜಮಾನ ಕುರಿತ ಚಿತ್ರ ಇದಾಗಿದ್ದು ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದೆ. ಕುಟುಂಬ ಸಮೇತರಾಗಿ ಚಿತ್ರವನ್ನು ನೋಡಬಹುದು. ಕಳೆದ ಎರಡು ವರ್ಷಗಳಿಂದ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಬಾದಾಮಿ ಸೇರಿದಂತೆ ವಿವಿಧ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ನಿಜವಾದ ಪೈಲ್ವಾನ್‌ನರಿಗೆ ನಟನೆಗೆ ಅವಕಾಶ ನೀಡಲಾಗಿದ್ದು, ಒಟ್ಟಾರೆ ನಮ್ಮ ದೇಶಿಯ ಕಲೆಗಳನ್ನು ಬೆಳೆಸುವ ಕೆಲಸ ಮಾಡಲಾಗಿದೆ ಎಂದರು.

ರಾಜು ಅಡಿವೆಪ್ಪನವರ, ಆನಂದ ಹುಲ್ಮನಿ, ಪೈಲ್ವಾನ್ ಕಾರ್ತಿಕ ಕಾಟಿ ಸೇರಿದಂತೆ ಇತರರಿದ್ದರು.

ದಿವಾಳಿ ಎದ್ದಿರುವ ಕಾಂಗ್ರೆಸ್ ಸರ್ಕಾರ:

ಅಭಿವೃದ್ಧಿಗೆ ಆದ್ಯತೆ ನೀಡದೇ ಗ್ಯಾರಂಟಿಗಳಿಗೆ ಹಣ ಹೊಂದಿಸುತ್ತಿರುವ ಕಾಂಗ್ರೆಸ್ ಸರ್ಕಾರ ದಿವಾಳಿ ಎದ್ದಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರ ರಚನೆಯಾದ ನಂತರದಿಂದ ಇಲ್ಲಿವರೆಗೂ ರೈತರ ಬಗ್ಗೆ ಒಂದು ಶಬ್ದವನ್ನು ಸಿಎಂ ಹೇಳುತ್ತಿಲ್ಲ. ಕೇವಲ ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಇವರ ಕೆಲಸವಾಗಿದೆ. ಅಭಿವೃದ್ಧಿ ಇಲ್ಲದ ಸರ್ಕಾರ ಯಾಕೆ ಬೇಕು ಎಂದರು. ಕಳೆದ ವರ್ಷ ನಮ್ಮ ಸರ್ಕಾರದ ಅವಧಿಯಲ್ಲಿ ಕೇಂದ್ರದ ಜೊತೆಗೆ ನಮ್ಮ ಅನುದಾನ ಸೇರಿ ರೈತರಿಗೆ ಪರಿಹಾರ ನೀಡಲಾಗಿದೆ. ಇವರು ಬರಿ ಕೇಂದ್ರದಿಂದ ಏನು ಬಂದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದರು.

ಇನ್ನು ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ. ಯಾರಿಗೆ ಟಿಕೆಟ್‌ ನೀಡಿದರೂ ಸ್ವಾಗತ ಎಂದರು.

ಜನರ ಮನಸ್ಸನ್ನು ಬೇರೆ ಕಡೆ ಬದಲಾವಣೆ ಮಾಡಲು ಈಗ ಹುಲಿ ಉಗುರಿನ ವಿಷಯ ಸರ್ಕಾರಕ್ಕೆ ನೆಪವಾಗಿದೆ. ಇಷ್ಟು ವರ್ಷ ಕಣ್ಮುಚ್ಚಿ ಕುಳಿತುಕೊಂಡು ಈಗ ಯಾಕೆ ಇದು ನೆಪಪಾಯಿತು ಎನ್ನುವುದೇ ಪ್ರಶ್ನೆಯಾಗಿದೆ ಎಂದರು.

Share this article