ಗೋಕರ್ಣದಲ್ಲಿ ಭಕ್ತಸಾಗರ

KannadaprabhaNewsNetwork |  
Published : Mar 09, 2024, 01:36 AM ISTUpdated : Mar 09, 2024, 03:53 PM IST
ಆತ್ಮಲಿಂಗ ದರ್ಶನ | Kannada Prabha

ಸಾರಾಂಶ

ಮಹಾಬಲೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿಯ ಶಿವಯೋಗ ಮಹಾಪರ್ವ ದಿನವಾದ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆತ್ಮಲಿಂಗದ ದರ್ಶನ ಪಡೆದರು. ಎಲ್ಲೆಡೆ ಶಿವಧ್ಯಾನ, ಶಿವ ಸ್ತುತಿ ಕೇಳಿಬಂತು.

ಗೋಕರ್ಣ: ಇಲ್ಲಿನ ಪ್ರಸಿದ್ಧ ಮಹಾಬಲೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿಯ ಶಿವಯೋಗ ಮಹಾಪರ್ವ ದಿನವಾದ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆತ್ಮಲಿಂಗದ ದರ್ಶನ ಪಡೆದರು. ಎಲ್ಲೆಡೆ ಶಿವಧ್ಯಾನ, ಶಿವ ಸ್ತುತಿ ಕೇಳಿಬಂತು.

ಬೆಳಗಿನ ಜಾವ 2.30ಕ್ಕೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಂಜಾನೆ ಸ್ವಲ್ಪ ಕಡಿಮೆ ಇದ್ದ ಭಕ್ತರ ಸಂಖ್ಯೆ ಮಧ್ಯಾಹ್ನದ ವೇಳೆ ಹೆಚ್ಚಿತು. ಮುಖ್ಯ ಕಡಲತೀರ ತನಕ ಸರತಿ ಸಾಲು ಕಂಡುಬಂತು. ಮಂದಿರದ ಆಡಳಿತ ಮಂಡಳಿ ಎಲ್ಲೆಡೆ ಪೆಂಡಾಲ್, ಕುಡಿಯುವ ನೀರು ಸೇರಿದಂತೆ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿತ್ತು.

ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಮುಂಜಾನೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಸಮಿತಿ ಸದಸ್ಯರಾದ ಮುರಳಿಧರ ಪ್ರಭು, ವೇ. ದತ್ತಾತ್ರೇಯ ಹಿರೇಗಂಗೆ, ವೇ. ಮಹಾಬಲ ಉಪಾಧ್ಯ, ವೇ. ಪರಮೇಶ್ವರ ಮಾರ್ಕಾಂಡೆ, ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದು, ಅಚ್ಚುಕಟ್ಟಿನ ವ್ಯವಸ್ಥೆಗೆ ಶ್ರಮಿಸಿದರು.

ಮಂದಿರದ ಅಮೃತಾನ್ನ ಭೋಜನ ಶಾಲೆಯಲ್ಲಿ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಹಾರಾಷ್ಟ್ರದಿಂದ ಹೆಚ್ಚಿನ ಜನರು ಆಗಮಿಸುವುದರಿಂದ ಇವರಿಗಾಗಿಯೇ ಶಾಬುದಾನಿ ಕಿಚಡಿ ಮಾಡಲಾಯಿತು. ಮೂವತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಉಪಾಹಾರ ಸ್ವೀಕರಿಸಿದರು.

ಮರಳಿನ ಲಿಂಗದ ಪೂಜೆ, ಕೋಟಿತೀರ್ಥದಲ್ಲಿ ಪುಣ್ಯ ಸ್ನಾನ: ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯ ಹಾಗೂ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಭಕ್ತರು ಸಮುದ್ರ ಸ್ನಾನ, ಕೋಟಿತೀರ್ಥ ಸ್ನಾನ ಮಾಡಿ ದೇವರ ದರ್ಶನ ಪಡೆದರೆ, ಇನ್ನೂ ಕೆಲವರು ಮುಖ್ಯ ಕಡಲತೀರದಲ್ಲಿ ಮರಳಿನ ಶಿವಲಿಂಗ ಮಾಡಿ ಪೂಜೆ, ಶಿವ ಧ್ಯಾನ ಮಾಡಿ ವಂದಿಸಿದರು.

ಪೊಲೀಸ್ ಬಂದೂಬಸ್ತ್‌: ಪಿಐ ಯೋಗೇಶ ಕೆ.ಎಂ. ನೇತೃತ್ವದಲ್ಲಿ ಪಿಎಸ್‌ಐ ಖಾದರ ಭಾಷಾ, ಶಶಿಧರ ತಮ್ಮ ಸಿಬ್ಬಂದಿಯೊಂದಿಗೆ ಎಲ್ಲೆಡೆ ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು. 

ಕಾರವಾರ ಮತ್ತಿತರೆಡೆಯಿಂದ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದರು. ಕಾರವಾರದ ಬಾಂಬ್ ನಿಷ್ಕ್ರಿಯ ದಳದವರು ಸಹ ಹಾಜರಿದ್ದರು, ಸೂಕ್ತ ನಿಗಾವಹಿಸಿದ್ದರು.ಆರೋಗ್ಯ ಇಲಾಖೆ ಮಂದಿರದ ಪಕ್ಕದಲ್ಲಿ ಪ್ರತ್ಯೇಕ ಕೌಂಟರ್‌ ತೆರದು ತುರ್ತು ಚಿಕಿತ್ಸೆ ಮತ್ತಿತರ ಮಾಹಿತಿ ನೀಡಿದರು.

PREV

Recommended Stories

ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!